ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಜೂನ್ 3ಕ್ಕೆ ಮುಂದೂಡಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಎಚ್.ಡಿ.ರೇವಣ್ಣ ಹಾಗೂ ಇತರರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 29 ರಂದು ಎಚ್.ಡಿ.ರೇವಣ್ಣ ಅವರನ್ನು ಎಸ್ ಐಟಿ ಬಂಧಿಸಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಏತನ್ಮಧ್ಯೆ, ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಎಚ್ ಡಿ ರೇವಣ್ಣ ಅವರ ಪುತ್ರ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿದೆ.