ಮೈಸೂರು: ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಎಸ್ ಐಟಿ ತನಿಖೆ ಚಾಲ್ತಿಯಲ್ಲಿರುವಂತೆಯೇ ಅತ್ತ ಭವಾನಿ ರೇವಣ್ಣ ಅವರ ತವರು ಮನೆಗೂ ಕೂಡ ಬೀಗ ಜಡಿಯಲಾಗಿದ್ದು, ಈ ಬೃಹತ್ ಬಂಗಲೆ ಇದೀಗ ಖಾಲಿ ಇದೆ ಎಂದು ಹೇಳಲಾಗಿದೆ.
ಹೌದು.. ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ನಿನ್ನೆ ಎಸ್ಐಟಿಗೆ ಶರಣಾಗಿದ್ದು, ತನಿಖೆ ತೀವ್ರಗೊಂಡಿದೆ. ಇತ್ತ ಇದೇ ಪ್ರಕರಣದ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಕೂಡ ನಾಪತ್ತೆಯಾಗಿದ್ದು ಅವರು ತಮ್ಮ ತವರು ಮನೆಯಲ್ಲಿರಬಹುದು ಎಂದು ಹೇಳಲಾಗಿತ್ತು.ಆದರೆ ಈ ಮಧ್ಯೆ ಸಾಲಿಗ್ರಾಮದಲ್ಲಿರುವ ಭವಾನಿ ರೇವಣ್ಣರ ತವರು ಮನೆಗೂ ಬೀಗ ಹಾಕಲಾಗಿದೆ. ಮನೆಯ ಕುಟುಂಬದ ಸದಸ್ಯರು ಯಾರೂ ಇಲ್ಲ, ಬೃಹತ್ ಬಂಗಲೆ ಖಾಲಿಯಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಅಲ್ಲಿಯೂ ಭವಾನಿ ರೇವಣ್ಣ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ವಾಸ್ತವ್ಯ ಹೂಡಿದ್ದರು. ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿಯೂ ಅವರ ಸುಳಿವು ಇರಿಲ್ಲಿಲ್ಲ. ತಮ್ಮ ಅಣ್ಣ ಪ್ರಕಾಶ್ ಮೃತಪಟ್ಟಾಗ ಭವಾನಿ ರೇವಣ್ಣ ಇಲ್ಲಿಗೆ ಆಗಮಿಸಿದ್ದರು. ಇದೀಗ ಸಾಲಿಗ್ರಾಮದ ತವರು ಮನೆ ಕೂಡ ಖಾಲಿಯಾಗಿದೆ.ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಇನ್ನು ಕಿಡ್ನ್ಯಾಪ್ ಪ್ರಕರಣದಲ್ಲಿ ನಿಮ್ಮ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇದೆ. ಆದ್ದರಿಂದ ನೀವು ಹೇಳಿರುವಂತೆ ನಾವು ನಿಮ್ಮನ್ನ ಜೂನ್ 01 ರಂದು ಖುದ್ದು ಹಾಜರಿರಬೇಕೆಂದು ಎಸ್‌ಐಟಿ ಸೂಚನೆ ನೀಡಿದೆ. ಕೆ.ಆರ್ ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್ ಸಂಬಂಧ ಭವಾನಿ ರೇವಣ್ಣಗೆ ಎಸ್‌ಐಟಿ ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ. ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1ರಂದು ಬೆಳಿಗ್ಗೆ 10 ರಿಂದ ಸಂಜೆ 5ಗಂಟೆ ಒಳೆಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭ ಖುದ್ದು ಮನೆಯಲ್ಲಿ ಹಾಜರಿರಬೇಕೆಂದು ಆದೇಶಿಸಿರೋ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.