ಬೆಂಗಳೂರು: ಭಾಗ್ಯಗಳ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕ ಹೆಣ್ಣುಮಕ್ಕಳಿಗೆ ಕೊಲೆ ಭಾಗ್ಯ, ಪ್ರಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ, ಅಸಹಾಯಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಕೆಆರ್‌ಐಡಿಎಲ್ ನಿಂದ ಬಿಲ್ ಪಾವತಿಯಾಗದೇ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯೂಹಕ್ಕೆ ಸಿಲುಕಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯ ಕರಿನೆರಳು ಅಚ್ಚೊತ್ತಿರುವ ಬೆನ್ನಲೇ ಕೆಆರ್‌ಐಡಿಎಲ್ ನಿಂದ ಬಿಲ್ ಪಾವತಿಯಾಗದೇ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ, ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ ಎಂದು ಹೇಳಿದ್ದಾರೆ.
ಭಾಗ್ಯಗಳ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕ ಹೆಣ್ಣುಮಕ್ಕಳಿಗೆ ಕೊಲೆ ಭಾಗ್ಯ, ಪ್ರಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ, ಅಸಹಾಯಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಲಾಗುತ್ತಿದೆ ಬರಿದಾಗಿರುವ ಸರ್ಕಾರಿ ಖಜಾನೆ ಗುತ್ತಿಗೆದಾರರ ಪಾಲಿಗೆ ಆತ್ಮಹತ್ಯೆಯ ಬಾವಿಯಾಗುತ್ತಿದೆ. ಈ ಸರ್ಕಾರಕ್ಕೆ ಮಾನವ ಜೀವಗಳೆಂದರೆ ಅದು ಕೇವಲದ ಸಂಕೇತವಾಗಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಷ್ಟೂ ಕಾಲ ರಾಜ್ಯದ ಜನತೆ ‘ನಿತ್ಯ ದುರಂತ ಸುದ್ದಿ’ ಯನ್ನಷ್ಟೇ ತಿಳಿಯಬೇಕಿದೆ, ಇದು ಕರ್ನಾಟಕದ ಪರಮ ದೌರ್ಭಾಗ್ಯವಲ್ಲದೇ ಇನ್ನೇನೂ ಅಲ್ಲ. ಎರಡು ಅಮೂಲ್ಯ ಜೀವಗಳ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸತ್ಯ ಏನೆಂಬುದು ಬಹಿರಂಗವಾಗಲೇಬೇಕಿದೆ, ಇದಕ್ಕೆ ಸಿಬಿಐ ತನಿಖೆಯೊಂದೇ ಉಳಿದಿರುವ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಮತ್ತೊಂದು ಬಲಿಯಾಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಶಾಕ್ ನಿಂದ ಹೊರಬರುವ ಮುನ್ನವೇ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಸುಳಿಗೆ ಈಗ ಗುತ್ತಿಗೆದಾರರೊಬ್ಬರು ಬಲಿಯಾಗಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ (KRIDL) ಗುತ್ತಿಗೆದಾರ ಶ್ರೀ ಪಿ.ಸಿ.ಗೌಡರ್ ಅವರು ಸಂಸ್ಥೆಯಿಂದ ಕಾಮಗಾರಿಯ ಬಿಲ್ ಪವಾತಿ ಬಾಕಿ ಇರುವುದರಿಂದ ಮನನೊಂದಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮತ್ಯೆಗೆ ಶರಣಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಕೂಡಲೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡಿ. ಈ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಗುತ್ತಿಗೆದಾರ ಬಾಕಿಯನ್ನು ಕೂಡಲೇ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.