ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅವಧಿ ಶನಿವಾರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆ ತಾವು ಶರಣಾಗುವ ಮುನ್ನ ದೆಹಲಿ ಜನತೆಗೆ ವಿಡಿಯೋ ಸಂದೇಶ ನೀಡಿದ್ದಾರೆ.
ಈ ಬಗ್ಗೆ ತಮ್ಮ ವಿಡಿಯೋ ಸಂದೇಶದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ನಾನು ಒಳಗಿರಲಿ ಅಥವಾ ಹೊರಗಿರಲಿ. ಎಲ್ಲಿದ್ದರೂ ದೆಹಲಿಯ ಕೆಲಸ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನನಗೆ ಚುನಾವಣಾ ಪ್ರಚಾರ ಮಾಡಲು 21 ದಿನಗಳ ಅನುಮತಿ ನೀಡಿತ್ತು. ನಾಳೆಗೆ ಈ ಅವಧಿ ಪೂರ್ಣಗೊಳ್ಳಲಿವೆ. ಭಾನುವಾರ ನಾನು ಶರಣಾಗಬೇಕು. ಭಾನುವಾರ ಮಧ್ಯಾಹ್ನ 3 ಗಂಟೆಗೆ ಜೈಲಿಗೆ ಹೋಗುತ್ತೇನೆ. ಅವರು (ಬಿಜೆಪಿ) ಎಷ್ಟು ದಿನ ನನ್ನನ್ನು ಜೈಲಿನಲ್ಲಿ ಇಡುತ್ತಾರೋ ಗೊತ್ತಿಲ್ಲ, ಆದರೆ, ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂಬ ಮಾತನ್ನು ನೆನಪಿಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ.ಮುಂದುವರಿದು, ಅವರು (ಬಿಜೆಪಿ) ಅನೇಕ ಬಾರಿ ನನ್ನನ್ನು ಒಡೆಯಲು ಪ್ರಯತ್ನಿಸಿದರು, ನನ್ನನ್ನು ಬಗ್ಗಿಸಲು ಪ್ರಯತ್ನಿಸಿದರು. ಆದರೆ, ನಾನು ತಲೆಬಾಗಲಿಲ್ಲ. ಜೈಲಿನಲ್ಲಿದ್ದಾಗಲೂ ಅನೇಕ ರೀತಿಯಲ್ಲಿ ಹಿಂಸಿಸುತ್ತಿದ್ದರು. ನನ್ನ ಔಷಧಿಗಳನ್ನು ನಿಲ್ಲಿಸಿದರು. ನಾನು 30 ವರ್ಷಗಳಿಂದ ಗಂಭೀರ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತೇನೆ. ಆದರೂ ಹಲವಾರು ದಿನಗಳವರೆಗೆ ನನ್ನ ಚುಚ್ಚುಮದ್ದನ್ನು ನಿಲ್ಲಿಸಿದ್ದರು.
ನಾನು 50 ದಿನಗಳ ಕಾಲ ಜೈಲಿನಲ್ಲಿದ್ದೆ. ಈ 50 ದಿನಗಳಲ್ಲಿ ನನ್ನ ತೂಕ 6 ಕೆಜಿ ಕಡಿಮೆಯಾಗಿದೆ, ನಾನು ಜೈಲಿಗೆ ಹೋದಾಗ ನನ್ನ ತೂಕ 70 ಕೆ.ಜಿ ಇತ್ತು. ಇಂದು 64 ಕೆ.ಜಿ ಇದ್ದೇನೆ. ಜೈಲಿನಿಂದ ಹೊರಬಂದರೂ ನನ್ನ ತೂಕ ಹೆಚ್ಚಾಗುತ್ತಿಲ್ಲ. ದೇಹದಲ್ಲಿ ಏನಾದರೂ ದೊಡ್ಡ ಕಾಯಿಲೆ ಇರಬಹುದು, ಹಲವು ಪರೀಕ್ಷೆಗಳನ್ನು ಮಾಡಿಸಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ನನ್ನ ಮೂತ್ರದಲ್ಲಿ ಕೀಟೋನ್ ಮಟ್ಟವು ತುಂಬಾ ಹೆಚ್ಚಾಗಿದೆ. ನಾನು ಶರಣಾಗಲು ಮಧ್ಯಾಹ್ನ 3 ಗಂಟೆಗೆ ನನ್ನ ಮನೆಯಿಂದ ಹೊರಡುತ್ತೇನೆ. ಬಹುಶಃ ಈ ಬಾರಿ ಅವರು ನನ್ನನ್ನು ಹೆಚ್ಚು ಹಿಂಸಿಸುತ್ತಾರೆ. ಆದರೆ, ನಾನು ತಲೆಬಾಗಲ್ಲ ಎಂದಿದ್ದಾರೆ.
ಜೈಲಿನಲ್ಲಿರುವ ನನಗೆ ನಿಮ್ಮ ಬಗ್ಗೆ ತುಂಬಾ ಚಿಂತೆಯಾಗುತ್ತದೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ಖಂಡಿತ ನಾನು ನಿಮ್ಮ ನಡುವೆ ಇರುವುದಿಲ್ಲ, ಆದರೆ ಚಿಂತಿಸಬೇಡಿ. ನಾನಿಲ್ಲದಿದ್ದರೂ ನಿಮ್ಮ ಎಲ್ಲಾ ಕೆಲಸಗಳನ್ನು ನಡೆಯುತ್ತಲೇ ಇರುತ್ತದೆ. ನಾನು ಎಲ್ಲೇ ಇದ್ದರೂ ಒಳಗಿರಲಿ, ಹೊರಗಿರಲಿ ದೆಹಲಿಯ ಕೆಲಸ ನಿಲ್ಲುವುದಿಲ್ಲ. ನಿಮ್ಮ ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್, ಆಸ್ಪತ್ರೆ, ಉಚಿತ ಔಷಧ, ಚಿಕಿತ್ಸೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 24 ಗಂಟೆಗಳ ವಿದ್ಯುತ್ ಮತ್ತು ಇತರ ಎಲ್ಲಾ ಕೆಲಸಗಳು ಮುಂದುವರೆಯುತ್ತವೆ.ವಾಪಸಾದ ನಂತರ ಪ್ರತಿ ತಾಯಿ ಮತ್ತು ಸಹೋದರಿಗೆ ತಿಂಗಳಿಗೆ ರೂ.1000 ನೀಡಲು ಪ್ರಾರಂಭಿಸುತ್ತೇನೆ. ನಿಮ್ಮ ಕುಟುಂಬದ ಮಗನಾಗಿ ನಾನು ಯಾವಾಗಲೂ ನನ್ನ ಕರ್ತವ್ಯವನ್ನು ಪೂರೈಸಿದ್ದೇನೆ. ನನ್ನ ತಂದೆ ತಾಯಿ ತುಂಬಾ ವಯಸ್ಸಾದವರು. ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿರುವ ನನಗೆ ಅವರ ಬಗ್ಗೆ ತುಂಬಾ ಚಿಂತೆಯಾಗುತ್ತಿದೆ. ನನ್ನ ಪೋಷಕರನ್ನು ನೋಡಿಕೊಳ್ಳಿ. ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿ. ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ನೀವು ಪ್ರತಿದಿನ ನನ್ನ ತಾಯಿಗಾಗಿ ಪ್ರಾರ್ಥಿಸಿದರೆ, ಅವರು ಖಂಡಿತವಾಗಿಯೂ ಆರೋಗ್ಯವಾಗಿರುತ್ತಾರೆಂದು ಹೇಳಿದ್ದಾರೆ.