ಲೈಂಗಿಕ ದೌರ್ಜನ್ಯ ಪ್ರಕರಣ: ಮೆಡಿಕಲ್ ಟೆಸ್ಟ್ ಬಳಿಕ ಪ್ರಜ್ವಲ್ ರೇವಣ್ಣ ಕೋರ್ಟ್ ಮುಂದೆ ಹಾಜರು

ಲೈಂಗಿಕ ದೌರ್ಜನ್ಯ ಪ್ರಕರಣ: ಮೆಡಿಕಲ್ ಟೆಸ್ಟ್ ಬಳಿಕ ಪ್ರಜ್ವಲ್ ರೇವಣ್ಣ ಕೋರ್ಟ್ ಮುಂದೆ ಹಾಜರು

Share

ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಶುಕ್ರವಾರ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆತಂದು ವಿಚಾರಣೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಮಹಿಳಾ ಪೊಲೀಸ್ ಅಧಿಕಾರಿ ಸುಮನ್ ಡಿ ಪೆನ್ನೇಕರ್ ಮತ್ತು ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರನ್ನು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರುಪಡಿಸಿದರು. ಇದಕ್ಕೂ ಮುನ್ನ ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆ ಮಾಡಲಾಯಿತುಮಹಿಳಾ ಪೊಲೀಸ್ ಅಧಿಕಾರಿಗಳ ಬೆಂಗಾವಲಿನಲ್ಲಿ ಅವರನ್ನು ಇಲ್ಲಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಪ್ರಜ್ವಲ್ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಅವರನ್ನು ಬಂಧಿಸಿದೆ.

ಪ್ರಜ್ವಲ್ ವಿರುದ್ಧ ಇದುವರೆಗೆ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಲಿದೆ.

ಪ್ರಾಥಮಿಕವಾಗಿ ದೇಹದ ತೂಕ, ಬಣ್ಣ, ಮಧುಮೇಹ, ಬಿಪಿ, ರಕ್ತದ ಮಾದರಿ, ಮೂತ್ರ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ಬಂಧನ ಸಂದರ್ಭದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಪ್ರಜ್ವಲ್ ರೇವಣ್ಣ ಆರೋಗ್ಯ ಸ್ಥಿತಿಯ ಬಗ್ಗೆ ಇಲ್ಲಿ ತಪಾಸಣೆ ಮಾಡಲಾಗುತ್ತದೆ. ಇದಾದ ಬಳಿಕ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ.

ಪೊಲೀಸ್ ಕಸ್ಟಡಿಗೆ ಸಿಕ್ಕ ಬಳಿಕ ವಿಶೇಷ ತಪಾಸಣೆ:

ಇನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ಬಳಿಕ ಕೆಲವೊಂದು ವಿಶೇಷ ತಪಾಸಣೆಗಳನ್ನು ಮಾಡಲಾಗುತ್ತದೆ. ಇದಕ್ಕೆ ಅನುಮತಿಯನ್ನು ಪಡೆದುಕೊಂಡು ಎಸ್‌ಐಟಿ ಈ ತಪಾಸಣೆಗಳನ್ನು ನಡೆಸುತ್ತದೆ.

ಪ್ರಜ್ವಲ್ ರೇವಣ್ಣ ಅವರ ಧ್ವನಿ ಪರೀಕ್ಷೆ, ಪುರುಷತ್ವ ಪರೀಕ್ಷೆ, ಲೈಂಗಿಕ ಕಾಯಿಲೆಗಳ ಬಗ್ಗೆಯೂ ಪರೀಕ್ಷೆಯನ್ನು ಇಂತಹ ವಿಶೇಷ ಪ್ರಕರಣಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ದೇಹದಲ್ಲಿ ಗಾಯದ ಅಥವಾ ಇನ್ನಿತರ ಕಲೆಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅತ್ಯಾಚಾರ ಸಂದರ್ಭದಲ್ಲಿ ಪರಚಿದ ಗಾಯದ ಗುರುತು ಸಿಕ್ಕರೆ ಇದು ಪ್ರಮುಖ ಸಾಕ್ಷಿಗಳಾಗುತ್ತವೆ.

ಇದನ್ನು ಹೊರತು ಪಡಿಸಿ, ಕೃತ್ಯ ನಡೆದ ಸ್ಥಳಗಳಲ್ಲಿ ಬೆಡ್‌ ಶೀಟ್‌, ಬೆಡ್‌, ತಲೆದಿಂಬುಗಳನ್ನು ವಶಕ್ಕೆ ಪಡೆದಕೊಂಡು ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ ಎಸ್‌ಐಟಿಗೆ ಸಿಕ್ಕ ವಿಡಿಯೋಗಳನ್ನು ಆಧರಿಸಿ ಘಟನಾ ಸ್ಥಳದ ಸುತ್ತ ಇರುವ ಸಾಕ್ಷಿಗಳನ್ನು ಸಂಗ್ರಹ ಮಾಡಲಾಗುತ್ತದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಗೋಡೆಯ ಬಣ್ಣ, ಬೆಡ್‌ ಶೀಟ್ ಬಣ್ಣ, ತಲೆದಿಂಬಿನ ಬಣ್ಣಗಳನ್ನು ಸಂಗ್ರಹ ಮಾಡಲಾಗುತ್ತದೆ. ಇವೆಲ್ಲವನ್ನು ತಾಳೆ ಮಾಡಿಕೊಂಡು ಆರೋಪಕ್ಕೆ ಆಧಾರವನ್ನು ನೀಡಬೇಕಾಗುತ್ತದೆ.


Share