ಪ್ಯೋಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಂದು ಹುಚ್ಚಾಟ ಮೆರೆದಿದ್ದು, ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾಗೆ ಕಸ ತುಂಬಿದ ಬಲೂನ್ ಗಳನ್ನು ರವಾನೆ ಮಾಡಿದೆ.
ಬೃಹತ್ ಬಲೂನ್‌ಗಳನ್ನು ಬಳಸಿಕೊಂಡು ‘ಕಸ’ ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಲಾಗಿದ್ದು, ಈ ಬಲೂನ್ ಗಳಲ್ಲಿ ಎಲ್ಲ ರೀತಿಯ ಕಸ ತುಂಬಲಾಗಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ ಎಂದು ದಕ್ಷಿಣ ಕೊರಿಯಾ ಮಾಧ್ಯಮಗಳು ಆರೋಪಿಸಿವೆ.ಉತ್ತರ ಕೊರಿಯಾದಿಂದ ಕಳುಹಿಸಲಾದ ಸುಮಾರು 260 ಬಲೂನ್‌ಗಳನ್ನು ಪತ್ತೆಹಚ್ಚಲಾಗಿದ್ದು, ಸೋಲ್‌ನ ಗಡಿ ಪ್ರದೇಶ ಸೇರಿದಂತೆ ದಕ್ಷಿಣ ಕೊರಿಯಾದ ವಿವಿಧ ಸ್ಥಳಗಳಲ್ಲಿ ‘ಕಸ’ ತುಂಬಿದ ಚೀಲಗಳನ್ನು ಎಸೆಯಲಾಗಿದೆ. ಚೀಲಗಳಲ್ಲಿ ಹಾನಿಗೊಳಗಾದ ವಸ್ತುಗಳು, ಕಾಗದದ ಹಾಳೆಗಳು, ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಗೊಬ್ಬರ, ಶೂಗಳ ಬಿಡಿಭಾಗ ಸೇರಿದಂತೆ ವಿವಿಧ ಕಸವನ್ನು ತುಂಬಿರುವುದು ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ.
ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಬಲೂನ್ ಹಾಗೂ ಕಸ ತುಂಬಿರುವ ಚೀಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಜಿಪಿಎಸ್ ಸಿಗ್ನಲ್‌ಗಳನ್ನು ಸತತ ಎರಡನೇ ದಿನಕ್ಕೆ ಜಾಮ್ ಮಾಡುವ ಪ್ರಯತ್ನಗಳನ್ನು ಉತ್ತರ ಕೊರಿಯಾ ಮಾಡಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಆರೋಪಿಸಿದೆ.