ಬೆಂಗಳೂರು: ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ “ಶತ್ರು ಭೈರವಿ ಯಾಗ” ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಕೇರಳದ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೀತಿದೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ ಎಂದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ನೇರವಾಗಿ ಯಾರ ಹೆಸರನ್ನು ಹೇಳಿಲ್ಲ. ಆದರೆ ತಮ್ಮ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ. ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಎಲ್ಲ ಗೊತ್ತಿದೆ. ಆದರೆ ನಾವು ನಂಬಿರುವ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದಿದ್ದಾರೆ.”ಕೇರಳದಲ್ಲಿ ನಮ್ಮ ಸರ್ಕಾರದ ವಿರುದ್ಧ ನನ್ನ ವಿರುದ್ಧ ದೊಡ್ಡ ಪ್ರಯೋಗ ನಡೆಯುತ್ತಿದೆ. ನಡೆಯುತ್ತಿರುವ ಪೂಜೆಯ ಬಗ್ಗೆ ಯಾರೋ ಒಬ್ಬರು ನನಗೆ ಲಿಖಿತವಾಗಿ ವಿವರಗಳನ್ನು ನೀಡಿದ್ದಾರೆ. ಅದು ಎಲ್ಲಿ ಮಾಡಲಾಗುತ್ತಿದೆ ಮತ್ತು ಯಾರು ಎಂದು ನನಗೆ ತಿಳಿಸಿದ್ದಾರೆ’’ ಎಂದು ಡಿಸಿಎಂ ಹೇಳಿದ್ದಾರೆ.
“ಶತ್ರು ಸಂಹಾರ(ಶತ್ರುಗಳ ನಾಶ)ಕ್ಕಾಗಿ ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗವನ್ನು ನಡೆಸಲಾಗುತ್ತಿದೆ. ಈ ಯಾಗಕ್ಕೆ ‘ಪಂಚ ಬಲಿ’ (ಐದು ರೀತಿಯ ಬಲಿ) ನೀಡಲಾಗುತ್ತಿದೆ… 21 ಆಡುಗಳು, ಮೂರು ಎಮ್ಮೆಗಳು, 21 ಕಪ್ಪು ಕುರಿಗಳು, ಐದು ಹಂದಿಗಳು…. ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ ” ಎಂದು ತಿಳಿಸಿದರು.
ಇಂತಹ ಯಾಗ, ಆಚರಣೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ‘ಅದು ಒಬ್ಬರ ನಂಬಿಕೆಯ ಮೇಲೆ… ಅವರು ನನ್ನ ವಿರುದ್ಧ ಯಾವುದೇ ಪ್ರಯೋಗ ಮಾಡಲಿ. ನಾನು ನಂಬುವ ಶಕ್ತಿ ನನ್ನನ್ನು ಕಾಪಾಡುತ್ತದೆ’ ಎಂದರು.
ಇದನ್ನು ಬಿಜೆಪಿ ಅಥವಾ ಜೆಡಿಎಸ್‌ನವರು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಯಾರು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಅವರೇ ಇದರಲ್ಲಿ ಪರಿಣತರು… ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ನೀವು(ಮಾಧ್ಯಮ) ಅದನ್ನು ಬೇರೆಡೆಗೆ ಕೊಂಡೊಯ್ಯುತ್ತೀರಿ, ಅದು ಯಾರೆಂದು ನಿಮಗೂ ತಿಳಿಯುತ್ತದೆ ಎಂದರು.
ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜರಾಜೇಶ್ವರಿ ದೇವಸ್ಥಾನದ ಬಳಿ ಪರಿಶೀಲಿಸಿ ನಿಮಗೇ ತಿಳಿಯುತ್ತದೆ… ರಾಜಕೀಯ ನಾಯಕರಲ್ಲದೆ ಬೇರೆ ಯಾರು ಮಾಡುತ್ತಾರೆ. “ಅವರ ಯಾಗಕ್ಕಿಂತ ಹೆಚ್ಚಾಗಿ, ನನಗೆ ದೇವರು ಮತ್ತು ಜನರ ಆಶೀರ್ವಾದವಿದೆ” ಎಂದು ಹೇಳಿದರು.