ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧೆ ಖಚಿತವಾಗಿದೆ. ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರ ಖಚಿತಪಡಿಸಿದ್ದಾರೆ. ದ್ವೈವಾರ್ಷಿಕ ಚುನಾವಣೆಗೆ ಯತೀಂದ್ರ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿಸಿದ್ದಾರೆ.
ಜೂನ್ 13 ರಂದು ನಡೆಯಲಿರುವ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಏಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವಿರೋಧ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಹೋಗಿ ಪಟ್ಟಿ ನೀಡಿ ಬಂದಿದ್ದೇವೆ. 11 ಸ್ಥಾನಕ್ಕೆ 300 ಆಕಾಂಕ್ಷಿಗಳು ಇದ್ದರು. ನಾವು 65 ಮಂದಿಯ ಶಾರ್ಟ್ ಲಿಸ್ಟ್ ಕೊಟ್ಟು ಬಂದಿದ್ದೇವೆ. ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಯತೀಂದ್ರ ಅವರದ್ದು ಮೊದಲೇ ಕಮಿಟ್ ಮೆಂಟ್ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ. ಇವರ ಜೊತೆಗೆ ವಿಧಾನಸಭಾ ಟಿಕೆಟ್ ತ್ಯಾಗ ಮಾಡಿದ ಹಿರಿಯರು, ಸೋತವರು ಇದ್ದಾರೆ. ಬೋಸರಾಜ್ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ದಾರೆ.ಅಕಾಂಕ್ಷಿಗಳಲ್ಲಿ ಹೈದ್ರಾಬಾದ್ ಕರ್ನಾಟಕ , ಮುಂಬಯಿ ಕರ್ನಾಟಕ, ಬಯಲು ಸೀಮೆ ಎಲ್ಲಾ ಭಾಗದವರಿದ್ದಾರೆ. 21 ಮಂದಿ ಕರಾವಳಿ ಭಾಗದಲ್ಲಿ, 11 ಮಂದಿ ಮೈಸೂರು ಭಾಗದಲ್ಲಿ ಆಕಾಂಕ್ಷಿಗಳು ಇದ್ದಾರೆ ಎಂದು ಡಿಸಿಎಂ ತಿಳಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧಾರದಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿರುವ 7 ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಸರತ್ತು ನಡೆದಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವರಿಷ್ಠರ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂಬ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅವರ ಅಭಿಪ್ರಾಯವನ್ನು ತೆಗೆದುಕೊಂಡಿದ್ದೇವೆ. ಪರಮೇಶ್ವರ ಅವರು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.