ಬೆಂಗಳೂರು: ತಡರಾತ್ರಿ 12.30ರ ಸುಮಾರಿಗೆ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯಗಳಾದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್.ನಗರದಲ್ಲಿ ಗುರುವಾರ ನಡೆದಿದೆ.
ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮೂವರು ಮಕ್ಕಳಿಗೆ ಬೆಂಕಿ ತಗುಲಿ ಗಂಭೀರ ಸುಟ್ಟ ಗಾಯಗಳಾಗಿವೆ. ಪತಿ ಮದನ್ ಚೌಹಾರ (32), ಹೆಂಡತಿ ಪ್ರೇಮ್ ಜಾಲ (28), ಮಕ್ಕಳಾದ ಹಿರದ್ (12), ಪ್ರಶಾಂತ್ (6) ಹಾಗೂ ಅನಿತಾ (8) ಗಂಭೀರ ಗಾಯಗೊಂಡವರು.
ನೇಪಾಳ ಮೂಲದ ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿತ್ತು. ಎಲ್ಲರಿಗೂ ಶೇಕಡ 90ರಷ್ಟು ಸುಟ್ಟ ಗಾಯಗಳಾಗಿವೆ. ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಮದನ್ ಸೆಕ್ಯುರಿಟಿ ಗಾರ್ಡ್ ಮತ್ತು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಮತ್ತು ಮಕ್ಕಳು ಮಲಗಿರುವುದು ಕಂಡು ಬಂದಿದೆ. ಈ ವೇಳೆ ಸೋರಿಕೆಯಾದ ಗ್ಯಾಸ್ ಯಾರ ಗಮನಕ್ಕೂ ಬಂದಿಲ್ಲ. ಅಡುಗೆ ಮನೆಗೆ ಹೋದ ಮದನ್ ಸಾಂಬಾರ್ ಕಾಯಿಸಲು ಒಲೆ ಹೊತ್ತಿಸಿದ್ದು, ಈ ವೇಳೆ ಬೆಂಕಿ ಇಡೀ ಮನೆಗೆ ಹೊತ್ತಿಕೊಂಡಿದೆ. ಸಂತ್ರಸ್ತರು ಸಹಾಯಕ್ಕಾಗಿ ಕೂಗಲು ಆರಂಭಿಸಿದ್ದು, ಈ ವೇಳೆ ನೆರೆಹೊರೆಯವರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮೂವರು ಮಕ್ಕಳ ಪೈಕಿ ಒಂದು ಮಗುವನ್ನು ಹೊರತುಪಡಿಸಿ ಉಳಿದವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.