ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಗುಂಪು ಹಲ್ಲೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ ವ್ಯಕ್ತಿಯ ಸಾವಿನ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ. ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ 108 ಮಂದಿಯಲ್ಲಿ ಇದುವರೆಗೆ 29 ಮಂದಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್ ಹಿತೇಂದ್ರ ಹೇಳಿದ್ದಾರೆ.’ಕಸ್ಟಡಿ ಸಮಯದಲ್ಲಿ ಸಾವು ಸಂಭವಿಸಿದಾಗ ಮೃತರ ಕುಟುಂಬವು ಪೊಲೀಸರನ್ನು ಅನುಮಾನಿಸುವುದು ತುಂಬಾ ಸಾಮಾನ್ಯವಾಗಿದೆ. ಆದರೆ, ಅವರು ಸಾರ್ವಜನಿಕ ಆಸ್ತಿಗೆ ಹಾನಿಯುಂಟುಮಾಡಬಹುದು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಬಹುದು ಎಂದು ಇದರ ಅರ್ಥವಲ್ಲ. ಇದು ಅಪರಾಧ. ದಾಳಿಯಲ್ಲಿ ಭಾಗಿಯಾದವರನ್ನು ಮಾತ್ರ ಬಂಧಿಸಲಾಗುವುದು’ ಎಂದು ಅವರು ಹೇಳಿದರು.
ಚನ್ನಗಿರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಸಿಐಡಿಯಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದು ಹಿತೇಂದ್ರ ತಿಳಿಸಿದರು.’ಘಟನೆ ನಡೆದಾಗ, ನಾನು ರಜೆಯಲ್ಲಿದ್ದೆ. ಹಾಗಾಗಿ ಪರಿಸ್ಥಿತಿಯನ್ನು ಅವಲೋಕಿಸಲು ನಾನು ಈಗ ಬಂದಿದ್ದೇನೆ. ಪೊಲೀಸ್ ಸಿಬ್ಬಂದಿಯ ಅಮಾನತು ಕುರಿತು ಸರ್ಕಾರವೇ ನಿರ್ಧಾರ ಕೈಗೊಂಡಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ’ ಎಂದರು.