ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಂಡಿದ್ದು, ತರಗತಿಯಲ್ಲೇ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಮೂಲಕ ಮಕ್ಕಳಲ್ಲಿ ಪಠ್ಯ ಪುಸ್ತಕ ಓದುವ ಹವ್ಯಾಸ ಬೆಳೆಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಶಿಕ್ಷಕರು ಪ್ರತಿ ವಿಷಯದಲ್ಲೂ 25 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿಕೊಂಡು, ನಿರ್ದಿಷ್ಟ ಸಮಯ ಮಿತಿಯ ಒಳಗೆ ಕಿರು ಪರೀಕ್ಷೆಗಳನ್ನು ನಡೆಸಬೇಕು. ಉತ್ತರ ಬರೆಯಲು ಪುಸ್ತಕಗಳನ್ನು ನೀಡಬೇಕು. ಮಕ್ಕಳು ಉತ್ತರಕ್ಕಾಗಿ ಪುಸ್ತಕದ ಪುಟಗಳನ್ನು ತಿರುವಿಹಾಕುವುದರಿಂದ ಓದುವ ಹವ್ಯಾಸ ರೂಢಿಯಾಗುತ್ತದೆ. ಪಠ್ಯಪುಸ್ತಕದ ಆವಶ್ಯಕತೆಯ ಅರಿವು ಮೂಡುತ್ತದೆ ಎಂದು 2024–25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಠ ಮಾಡುವಾಗಲೇ ಶಿಕ್ಷಕರು ಬೋಧನಾ ಅವಧಿಯ ಕೊನೆಯಲ್ಲಿ ಪ್ರಶ್ನೆಗಳನ್ನು ನೀಡಬೇಕು. ಅವುಗಳಿಗೆ ಸ್ಥಳದಲ್ಲೇ ಉತ್ತರ ಬರೆಯಿಸಬೇಕು. ಉತ್ತರದ ಹಾಳೆಗಳನ್ನು ವಿದ್ಯಾರ್ಥಿಗಳೇ ಪರಸ್ಪರ ವಿನಿಮಯ ಮಾಡಿಕೊಂಡು ಮೌಲ್ಯಮಾಪನ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತಾವು ಮಾಡಿದ ತಪ್ಪುಗಳ ಅರಿವು ಮೂಡುವುದರ ಜೊತೆಗೆ, ಮೌಲ್ಯಾಂಕನದ ಅನುಭವವೂ ಆಗುತ್ತದೆ ಎಂದು ವಿವರಿಸಲಾಗಿದೆ.ಇದುವರೆಗೂ ಇಂತಹ ಪ್ರಯೋಗಗಳನ್ನು ವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾತ್ರ ಮಾಡಲಾಗುತ್ತಿತ್ತು. ಈ ವರ್ಷದಿಂದ ಎಂಟು, ಒಂಬತ್ತನೇ ತರಗತಿ ಹಾಗೂ ಎಲ್ಲ ವಿಷಯಗಳಲ್ಲೂ ಅನುಸರಿಸಬೇಕು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಆಧಾರದಲ್ಲಿ ಆರು ಗುಂಪುಗಳಾಗಿ ವಿಂಗಡಿಸಿ, ಕಡಿಮೆ ಕಲಿಕಾ ಸಮರ್ಥ್ಯದ ಮಕ್ಕಳಿಗೆ ಹೆಚ್ಚುವರಿ ಅವಧಿಯ ಬೋಧನೆ, ಪ್ರತ್ಯೇಕ ಕಲಿಕಾ ಕೌಶಲಗಳ ಮೂಲಕ ಅವರನ್ನು ಇತರೆ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಸಿದ್ಧಗೊಳಿಸಲು ಶಿಕ್ಷಕರು ಶ್ರಮವಹಿಸಬೇಕು ಎಂದು ಹೇಳಲಾಗಿದೆ.
ಸದ್ಯ ರೂಢಿಯಲ್ಲಿರುವ ಪರೀಕ್ಷಾ ಕ್ರಮದಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ನೆನಪಿಟ್ಟುಕೊಂಡು ಬರೆಯಬೇಕಾಗುತ್ತದೆ. ಓಪನ್ ಬುಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಪುಸ್ತಕ, ನೋಟ್ ಬುಕ್ ಮತ್ತು ಇನ್ನಿತರ ರೆಫರೆನ್ಸ್ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹೀಗಾಗಿ, ಉತ್ತರವನ್ನು ಶೀಘ್ರಗತಿಯಲ್ಲಿ ಬರೆಯಲು ಪುಸ್ತಕಗಳನ್ನು ಮುಂಚಿತವಾಗಿಯೇ ಓದಿಕೊಂಡಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಸದ್ಯ ಎಲ್ಲಾ ವಿಷಯಗಳಲ್ಲಿ 25 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದ್ದು, ಫಲಿತಾಂಶ ನೋಡಿ ಮುಂದಿನ ನಿರ್ಣಯ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.