ಹಾಸನ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಚೇತನ್ ಮತ್ತು ಲಿಖಿತ್ ಗೌಡಗೆ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ನೀಡಿದೆ.
ಹಾಸನದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ [ಸಿಇಎನ್] ಅಪರಾಧ ಪೊಲೀಸ್ ಠಾಣೆಯಲ್ಲಿ ಚೇತನ್ ಮತ್ತು ಲಿಖಿತ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು ಪ್ರಕರಣದಲ್ಲಿ ಇಬ್ಬರು 6 ಮತ್ತು 7ನೇ ಆರೋಪಿಗಳಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಹಾಸನ ತಾಲೂಕಿನ ಯಳಗುಂದದ ಚೇತನ್ ಹಾಗೂ ಚನ್ನರಾಯಪಟ್ಟಣದ ಲಿಖಿತ್ ಗೌಡ ಎಂಬುವರನ್ನು ಪೊಲೀಸರು ಬಂಧಿಸಿದ್ದರು.ಮೇ 12ರಂದು ಎಸ್‌ಐಟಿ ಅವರನ್ನು ಬಂಧಿಸಿತ್ತು. ಚೇತನ್ ಮತ್ತು ಲಿಖಿತ್ ಗೌಡ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದ್ದು, 18 ದಿನಗಳ ನಂತರ ಜಾಮೀನು ನೀಡಲಾಗಿದೆ. ಶುಕ್ರವಾರ ಹಾಸನ ಸಬ್ ಜೈಲಿನಿಂದ ಬಿಡುಗಡೆಯಾಗಲಿರುವ ಚೇತನ್ ಮತ್ತು ಲಿಖಿತ್ ಗೌಡ ಪರವಾಗಿ ಹಿರಿಯ ವಕೀಲ ಹರೀಶ್ ಬಾಬು ವಾದ ಮಂಡಿಸಿದ್ದಾರೆ.