ಬೆಂಗಳೂರು ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ; ಇನ್ನಷ್ಟು ಜನರಿಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ

ಬೆಂಗಳೂರು ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ; ಇನ್ನಷ್ಟು ಜನರಿಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ

Share

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗುರುವಾರ ಇನ್ನೂ ಕೆಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ವರದಿ ನೆಗೆಟಿವ್ ಬಂದಿರುವ ತೆಲುಗು ನಟಿ ಆಶಿ ರೈ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ನಟಿ ಹೇಮಾ ಕೊಲ್ಲಾ ಅವರಿಗೆ ಸಿಸಿಬಿ ಎರಡನೇ ನೋಟಿಸ್ ನೀಡಿದೆ. ಹೇಮಾ ಅವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಇದಕ್ಕೂ ಮುನ್ನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ 16 ಮಂದಿಗೆ ನೋಟಿಸ್ ಜಾರಿ ಮಾಡಿತ್ತು.

ಮೇ 19 ಮತ್ತು 20ರ ಮಧ್ಯರಾತ್ರಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಹೇಮಾ ಮತ್ತು ಇತರ 85 ಮಂದಿಗೆ ನಡೆಸಿದ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿತ್ತು. ಪಾರ್ಟಿಯಲ್ಲಿ ಕನಿಷ್ಠ 101 ಜನರು ಭಾಗವಹಿಸಿದ್ದರು. ಅದನ್ನು ಹುಟ್ಟುಹಬ್ಬದ ಸಂಭ್ರಮಾಚರಣೆ ಎಂದು ಹೇಳಲಾಗಿತ್ತು.

ಶಂಕಿತರು 80ಕ್ಕೂ ಹೆಚ್ಚು ಮಂದಿ ಇರುವುದರಿಂದ ಅವರನ್ನು ಬ್ಯಾಚ್‌ಗಳಲ್ಲಿ ಪ್ರಶ್ನಿಸಲು ಸಿಸಿಬಿ ಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರ್ತ್‌ಡೇ ಪಾರ್ಟಿ ಎಂದು ಭಾವಿಸಿ ಕೂಟಕ್ಕೆ ಹಾಜರಾಗಿದ್ದೇನೆ ಮತ್ತು ಡ್ರಗ್ ಸೇವನೆ ಬಗ್ಗೆ ತಿಳಿದಿರಲಿಲ್ಲ ಎಂದು ವಿಡಿಯೋದಲ್ಲಿ ಆಶಿ ಹೇಳಿಕೊಂಡಿದ್ದು, ಡ್ರಗ್ ಸೇವನೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.ಪಾರ್ಟಿಯ ಸಂಘಟಕರು ಮತ್ತು ಮಾದಕ ದ್ರವ್ಯ ದಂಧೆಕೋರರು ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಇದುವರೆಗೆ ಬಂಧಿಸಿದೆ.

ಹೆಬ್ಬಗೋಡಿನಲ್ಲಿರುವ ಜಿಆರ್ ಫಾರಂಹೌಸ್ ಮೇಲೆ ದಾಳಿ ನಡೆಸಿ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೇನ್, ಆರು ಗ್ರಾಂ ಹೈಡ್ರೋಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಆಂಧ್ರಪ್ರದೇಶದ ಶಾಸಕ ಮತ್ತು ಸಚಿವರೊಬ್ಬರ ಸ್ಟಿಕ್ಕರ್ ಇರುವ ಕಾರು ಪತ್ತೆಯಾಗಿದೆ. ಕಾರು ಯಾರ ಮಾಲೀಕತ್ವದಲ್ಲಿದೆ ಮತ್ತು ಅವರಿಗೆ ಶಾಸಕ ಮತ್ತು ಸಚಿವರ ಸ್ಟಿಕ್ಕರ್ ಹೇಗೆ ಸಿಕ್ಕಿತು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.


Share