ಲೈಂಗಿಕ ಕಿರುಕುಳ ಪ್ರಕರಣ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ಪ್ರಜ್ವಲ್ ರೇವಣ್ಣ, ವೈದ್ಯಕೀಯ ತಪಾಸಣೆ ಇಂದು

ಲೈಂಗಿಕ ಕಿರುಕುಳ ಪ್ರಕರಣ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ಪ್ರಜ್ವಲ್ ರೇವಣ್ಣ, ವೈದ್ಯಕೀಯ ತಪಾಸಣೆ ಇಂದು

Share

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಸುಕಿನ 1.10 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿಯಿಂದ ಬಂಧನಕ್ಕೊಳಗಾದ 33 ವರ್ಷದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಮಹಿಳಾ ತಂಡವು ಪೊಲೀಸ್ ಜೀಪ್‌ನಲ್ಲಿ ಮಧ್ಯರಾತ್ರಿ 2.02ರ ಸುಮಾರಿಗೆ ಎಸ್‌ಐಟಿ ಕಚೇರಿಗೆ ಕರೆತಂದಿತು. ಇದೀಗ ಎಸ್‌ಐಟಿ ಕಚೇರಿಯಲ್ಲಿ ಪ್ರಜ್ವಲ್ ರಾತ್ರಿ ಕಳೆದಿದ್ದಾರೆ.ಪ್ರಜ್ವಲ್ ಅವರನ್ನು ಶುಕ್ರವಾರ ಬೆಳಗ್ಗೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ಶುಕ್ರವಾರ ಬೆಳಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅತ್ಯಾಚಾರ ಘಟನೆಗಳು ನಡೆದಿವೆ ಎಂದು ಹೇಳಲಾದ ಪ್ರಜ್ವಲ್ ರೇವಣ್ಣ ಅವರ ವಸತಿ ಗೃಹ ಮತ್ತು ಹೊಳೆನರಸೀಪುರದ ಫಾರ್ಮ್‌ ಹೌಸ್‌ಗಳಿಗೆ ಸ್ಥಳ ಮಹಜರಿಗಾಗಿ ಅವರನ್ನು ಕರೆದೊಯ್ಯಬೇಕಾಗಿರುವುದರಿಂದ ಎಸ್‌ಐಟಿ ಅವರನ್ನು ಕಸ್ಟಡಿಗೆ ಕೇಳಲಿದೆ. ಬಳಿಕ ಎಸ್‌ಐಟಿ ಅಧಿಕಾರಿಗಳು ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ.ಸುಮಾರು 34 ದಿನಗಳಿಂದ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ಗಾಗಿ ಹುಡುಕಾಟ ನಡೆಸಿದ್ದರು. ಅವರ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ಸೇರಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದು, ಅವರ ವಿರುದ್ಧ ಬಂಧನ ವಾರಂಟ್ ಕೂಡ ಜಾರಿ ಮಾಡಲಾಗಿದೆ. ಇಂಟರ್‌ಪೋಲ್ ಮೂಲಕ ಸಿಬಿಐ ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಅನ್ನು ಕೂಡ ಜಾರಿ ಮಾಡಿತ್ತು. ಎಸ್‌ಐಟಿಯಿಂದ ಎರಡು ರೆಗ್ಯುಲರ್ ನೋಟಿಸ್ ಕೂಡ ಜಾರಿಯಾಗಿದೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ಹಾಜರಾಗುವುದಾಗಿ ಹೇಳಿದ್ದ ಪ್ರಜ್ವಲ್ ಅವರ 2.57 ನಿಮಿಷಗಳ ವಿಡಿಯೋವನ್ನು ಸೋಮವಾರ ಬಿಡುಗಡೆ ಮಾಡಿದ್ದರು. ಗುರುವಾರ ಮಧ್ಯಾಹ್ನ ಮ್ಯೂನಿಚ್‌ನಿಂದ ವಿಮಾನದಲ್ಲಿ ಶುಕ್ರವಾರ ಬೆಳಗಿನ ಜಾವ 12.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ಎಸ್‌ಐಟಿ ಕಚೇರಿಯ ಹೊರಗೆ ಮತ್ತು ಬೌರಿಂಗ್ ಆಸ್ಪತ್ರೆಯಲ್ಲೂ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.


Share