ಸಾರ್ವಜನಿಕ ಭಾಷಣದ ಘನತೆ, PM ಸ್ಥಾನದ ಗೌರವ ಕಡಿಮೆ ಮಾಡಿದ ಮೊದಲ ಪ್ರಧಾನಿ ಮೋದಿ: ಮನಮೋಹನ್ ಸಿಂಗ್

ಸಾರ್ವಜನಿಕ ಭಾಷಣದ ಘನತೆ, PM ಸ್ಥಾನದ ಗೌರವ ಕಡಿಮೆ ಮಾಡಿದ ಮೊದಲ ಪ್ರಧಾನಿ ಮೋದಿ: ಮನಮೋಹನ್ ಸಿಂಗ್

Share

2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಡಕು ಮೂಡಿಸುವ ಭಾಷಣಗಳನ್ನು ಮಾಡುವ ಮೂಲಕ ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಹುದ್ದೆಯ ಗೌರವ ಕಡಿಮೆ ಮಾಡಿದ ಮೊದಲ ಪ್ರಧಾನಿ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಗುರುವಾರ ಟೀಕಿಸಿದ್ದಾರೆ.

ಜೂನ್ 1 ರಂದು ನಡೆಯಲಿರುವ ಏಳನೇ ಮತ್ತು ಅಂತಿಮ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಪಂಜಾಬ್‌ನಲ್ಲಿ ಮತದಾರರಿಗೆ ಪತ್ರದ ಮೂಲಕ ಮನವಿ ಮಾಡಿದ ಮನಮೋಹನ್ ಸಿಂಗ್, ಮತದಾರರಿಗೆ ಪ್ರೀತಿ, ಶಾಂತಿ, ಭ್ರಾತೃತ್ವ ಮತ್ತು ಸೌಹಾರ್ದತೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಆಧಾರಿತ ಬೆಳವಣಿಗೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ಸಾಧ್ಯ ಎಂದು ಮಾಜಿ ಪ್ರಧಾನಿ ಪ್ರತಿಪಾದಿಸಿದ್ದಾರೆ.ಮೋದಿಯವರ ಇತ್ತೀಚಿನ ಚುನಾವಣಾ ಪ್ರಚಾರದ ವಾಕ್ಚಾತುರ್ಯದ ವಿರುದ್ಧ ವಾಗ್ದಾಳಿ ನಡೆಸಿದ ಮನಮೋಹನ್ ಸಿಂಗ್, “ಈ ಹಿಂದೆ ಯಾವ ಪ್ರಧಾನಿಯೂ ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ಇಂತಹ ದ್ವೇಷಪೂರಿತ, ಅಸಂಸದೀಯ ಪದಗಳನ್ನು ಬಳಸಿಲ್ಲ” ಎಂದು ಬರೆದಿದ್ದಾರೆ.

“ಮೋದಿ ಜಿ ಅವರು ಅತ್ಯಂತ ಕೆಟ್ಟದಾಗಿ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಒಡಕು ಮೂಡಿಸುವ ಭಾಷಣಗಳಾಗಿದ್ದು, ಸಾರ್ವಜನಿಕ ಭಾಷಣದ ಘನತೆ ಮತ್ತು ಪ್ರಧಾನಿ ಸ್ಥಾನದ ಗೌರವವನ್ನು ಕಡಿಮೆ ಮಾಡಿದ ಮೊದಲ ಪ್ರಧಾನಿ ಮೋದಿ ಜಿ” ಎಂದು ಮಾಜಿ ಪ್ರಧಾನಿ ಕಿಡಿ ಕಾರಿದ್ದಾರೆ.

“ನಾನು ನನ್ನ ಜೀವನದಲ್ಲಿ ಎಂದಿಗೂ ಒಂದು ಸಮುದಾಯದಿಂದ ಇನ್ನೊಂದು ಸಮುದಾಯವನ್ನು ಪ್ರತ್ಯೇಕಿಸಿಲ್ಲ. ಅದು ಬಿಜೆಪಿಯ ಏಕೈಕ ಹಕ್ಕುಸ್ವಾಮ್ಯ” ಎಂದು ಕಾಂಗ್ರೆಸ್ ಹಿರಿಯ ನಾಯಕ ಟೀಕಿಸಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪನ್ಮೂಲಗಳ ಮೊದಲ ಹಕ್ಕು ಮುಸ್ಲಿಮರಿಗೆ ಇರುತ್ತದೆ ಎಂದು ಮೋದಿ ಆರೋಪಿಸಿದ್ದರು. ಅಲ್ಲದೆ ಇದೇ ಭಾಷಣದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದರು ಎಂದು ಮೋದಿ ಆರೋಪಿಸಿದ್ದರು. ಮೋದಿ ಆರೋಪಗಳ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರು ಇಂದು ಬಹಿರಂಗ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.


Share