ಬೆಂಗಳೂರು: ರಸ್ತೆಗಳ ಗುಂಡಿ ಪತ್ತೆಗೆ AI ಕ್ಯಾಮೆರಾ ಮೊರೆ ಹೋದ BBMP!

ಬೆಂಗಳೂರು: ರಸ್ತೆಗಳ ಗುಂಡಿ ಪತ್ತೆಗೆ AI ಕ್ಯಾಮೆರಾ ಮೊರೆ ಹೋದ BBMP!

Share

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳನ್ನು ಸ್ಕ್ಯಾ‌ನಿಂಗ್‌ ಮಾಡಿ ಗುಂಡಿಗಳನ್ನು ಪತ್ತೆ ಮಾಡಲು ಬಿಬಿಎಂಪಿಯು ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಮೊರೆ ಹೋಗಿದೆ.

ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಮಳೆಯಿಂದಾಗಿ ಗುಂಡಿ ಬಿದ್ದು ಹದಗೆಟ್ಟು ಹೋಗಿವೆ. ಭೌತಿಕವಾಗಿ ಎಲ್ಲ ರಸ್ತೆಗಳನ್ನು ಪರಿಶೀಲಿಸಿ ಗುಂಡಿಗಳನ್ನು ಪತ್ತೆ ಮಾಡುವುದು ಕಷ್ಟ.

ಹೀಗಾಗಿಯೇ, ಪಾಲಿಕೆಯು ಎಐ ಕ್ಯಾಮೆರಾಗಳ ಮೂಲಕ ರಸ್ತೆ ಗುಂಡಿಗಳು, ಕಸ, ರಸ್ತೆ ಬದಿಯಲ್ಲಿನ ಧೂಳನ್ನು ಗುರುತಿಸಿ ತೆರವು ಮಾಡಲು ಉದ್ದೇಶಿಸಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಈ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಕಂಡುಬರುತ್ತದೆ, ಗುಂಡಿಗಳಿಂದಾಗಿ ಸಂಚಾರ ನಿಧಾನಗೊಳ್ಳುತ್ತದೆ ಮತ್ತು ವಾಹನ ಚಾಲಕರ ಜೀವವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದ್ದಾರೆ.ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಗಿರಿನಾಥ್, ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳ ಸ್ಥಿತಿಗತಿ ಅರಿಯಲು 15 ಎಐ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಈ ಕ್ಯಾಮೆರಾಗಳನ್ನು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ವಾಹನಗಳಲ್ಲಿ ಅಳವಡಿಸಲಾಗುವುದು.

ಕ್ಯಾಮೆರಾಗಳನ್ನು ಅಳವಡಿಸಿರುವ ವಾಹನಗಳು ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸಿ, ರಸ್ತೆ ಗುಂಡಿಗಳನ್ನು ಸೆರೆ ಹಿಡಿದು ಮಾಹಿತಿ ನೀಡಲಿವೆ. ಪ್ರತಿಯೊಂದು ವಾಹನವು ನಾಲ್ಕೈದು ತಾಸು ಸಂಚರಿಸಲಿದ್ದು, 20 ಕಿ.ಮೀ.ನಷ್ಟು ರಸ್ತೆ ಮಾರ್ಗವನ್ನು ಸ್ಕ್ಯಾ‌ನ್‌ ಮಾಡಲಿವೆ. ಇದರಿಂದ ರಸ್ತೆಗಳ ವಸ್ತುಸ್ಥಿತಿ ತಿಳಿದು, ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಇದರ ಯಶಸ್ಸು ಆಧರಿಸಿ ವಾರ್ಡ್‌ ರಸ್ತೆಗಳ ಪರಿಶೀಲನೆಗೂ ಎಐ ಕ್ಯಾಮೆರಾಗಳನ್ನು ಬಳಸಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ನಗರದಲ್ಲಿನ 6 ಸಾವಿರಕ್ಕೂ ಅಧಿಕ ಗುಂಡಿಗಳ ಪೈಕಿ 1,500 ಗುಂಡಿಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಬಿಬಿಎಂಪಿ ಮೇ 31ಕ್ಕೆ ಎಲ್ಲಾ ಗುಂಡಿಗಳನ್ನು ತುಂಬಲು ಗಡುವು ನೀಡಿದೆ.


Share