ಅಕ್ರಮ ಹಣ ವರ್ಗಾವಣೆ ಕೇಸ್: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 6 ಅಧಿಕಾರಿಗಳ ವಿರುದ್ಧ ದೂರು ದಾಖಲು

ಅಕ್ರಮ ಹಣ ವರ್ಗಾವಣೆ ಕೇಸ್: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 6 ಅಧಿಕಾರಿಗಳ ವಿರುದ್ಧ ದೂರು ದಾಖಲು

Share

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಸುಮಾರು 94.73 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆರೋಪದ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನಿಗಮದ ಆಧೀಕ್ಷಕರಾಗಿದ್ದ ಚಂದ್ರಶೇಖರನ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ, ಅವರು ಡೆತ್ ನೋಟ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ್, ಅಕೌಂಟ್ಸ್ ಅಧಿಕಾರಿ ಪರಶುರಾಮ್ ಜಿ ದುರುಗಣ್ಣನವರ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ರಾವಲ್ ಅವರ ಹೆಸರನ್ನು ಬರೆದಿದ್ದಾರೆ.

ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ಉನ್ನತ ಆಡಳಿತ ಮತ್ತತರ ಮೂರನೇ ವ್ಯಕ್ತಿಗಳ ಮೋಸದ ಚಟುವಟಿಕೆಗಳಿಂದ ಸಂಸ್ಥೆಯ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ನಿಗಮದ ಜನರಲ್ ಮ್ಯಾನೇಜರ್ ಎ. ರಾಜಶೇಖರ್ ಮೇ 28 ರಂದು ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಫೆಬ್ರವರಿ 19 ರಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ತನ್ನ ಖಾತೆಯನ್ನು ವಸಂತನಗರ ಶಾಖೆಯಿಂದ ಎಂಜಿ ರಸ್ತೆಯ ರಾಷ್ಟ್ರೀಯ ಬ್ಯಾಂಕ್ ಶಾಖೆಗೆ ವರ್ಗಾಯಿಸಿರುವುದಾಗಿ ಅವರು ಹೇಳಿದ್ದಾರೆ. ವಿವಿಧ ಬ್ಯಾಂಕ್ ಗಳು ಮತ್ತು ರಾಜ್ಯ ಹುಜುರ್ ಖಜಾನೆ-IIರಿಂದ ಎಂಜಿ ರಸ್ತೆ ಶಾಖೆಯ ನಮ್ಮ ಬ್ಯಾಂಕ್ ಖಾತೆಗೆ ಒಟ್ಟು 187.33 ಕೋಟಿ ರೂ. ವರ್ಗಾವಣೆಯಾಗಿದ್ದಾಗಿ ಅವರು ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಗಮ ಬ್ಯಾಂಕ್ ನೊಂದಿಗೆ ಸಮನ್ವಯ ಸಾಧಿಸಿಲ್ಲ. ತದನಂತರ ನಮ್ಮ ನೋಂದಾಯಿತ ವಿಳಾಸಕ್ಕೆ ಹೊಸ ಪಾಸ್ ಬುಕ್ ಹಾಗೂ ಚೆಕ್ ಬುಕ್ ಕಳುಹಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಅಧಿಕಾರಿಗಳು ಮೇ 21 ರಂದು ದಾಖಲೆಗಳನ್ನು ಸಂಗ್ರಹಿಸಲು ಶಾಖೆಗೆ ಭೇಟಿ ನೀಡಿದಾಗ ಅವರನ್ನು ಬ್ರಾಂಚ್ ಮ್ಯಾನೇಜರ್ ತಡೆದಿದ್ದಾರೆ. ನಂತರ ಮೇ 22 ರಂದು ನಿಗಮದ ಕಚೇರಿಗೆ ಭೇಟಿ ನೀಡಿದಾಗ, ದಾಖಲೆಗಳನ್ನು ಈಗಾಗಲೇ ನೀಡಲಾಗಿದೆ ಎಂದು ಹೇಳಿದ್ದಾರೆ. ಅದು ಸುಳ್ಳೆಂದು ಕಂಡುಬಂದಿದೆ. ಮತ್ತಷ್ಟು ಪರಿಶೀಲಿಸಿದಾಗ ಅಧಿಕಾರಿಗಳು ಮತ್ತು ಖಾತೆ ಅಧಿಕಾರಿಯ ನಕಲಿ ಸಹಿಯೊಂದಿಗೆ ಹಲವಾರು ನಕಲಿ ಪತ್ರಗಳು, ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ ಮನವಿಗಳು ಬಹಿರಂಗವಾಗಿದ್ದು, ನಕಲಿ ದಾಖಲೆಗಳಿಂದ ಬ್ಯಾಂಕ್ ಖಾತೆಯಿಂದ ಹಣವನ್ನು ವಿತರಿಸಲಾಗಿದೆ. ಪಾಸ್‌ಬುಕ್ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆಗಳನ್ನು ಆಧರಿಸಿ ರಾಷ್ಟ್ರೀಯ ಬ್ಯಾಂಕ್‌ ಖಾತೆಯಿಂದ 94.73 ಕೋಟಿ ರೂ. ವಿತರಿಸಲಾಗಿದೆ.

ಅಕ್ರಮಗಳನ್ನು ಬಗೆಹರಿಸುವಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ವಿಫಲವಾಗಿದೆ ಮತ್ತು ಅಂತಹ ಕಾನೂನುಬಾಹಿರ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ,

ಶಾಖೆಯ ಅಧಿಕಾರಿಗಳು ಮತ್ತು ಇತರ ಮೂರನೇ ವ್ಯಕ್ತಿಗಳು ನಡೆಸುತ್ತಿರುವ ಇಂತಹ ಮೋಸದ ಕೃತ್ಯಗಳ ಬಗ್ಗೆ ಸಂಪೂರ್ಣ ಅರಿವಿದೆ. ಇದಲ್ಲದೆ, ಈ ಕೃತ್ಯಗಳ ಬಗ್ಗೆ ಗಮನಕ್ಕೆ ಬಂದ ನಂತರ, ನಿಗಮದ ಉದ್ಯೋಗಿಗಳಲ್ಲಿ ಒಬ್ಬರಾದ ಅಧೀಕ್ಷಕ ಸೂಪರಿಂಟೆಂಡೆಂಟ್ ಚಂದ್ರಶೇಖರ ಪಿ ಆತ್ಮಹತ್ಯೆ ಮಾಡಿಕೊಂಡಿದ್ದು,ಡೇತ್ ನೋಟ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಲೆಕ್ಕಪತ್ರ ಅಧಿಕಾರಿ ಮತ್ತು ಮುಖ್ಯ ವ್ಯವಸ್ಥಾಪಕರ ಹೆಸರನ್ನು ನಮೂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.”ಉನ್ನತ ಆಡಳಿತ ಮಂಡಳಿ, ಬ್ಯಾಂಕ್ ಅಧಿಕಾರಿಗಳು ಎಸಗಿರುವ ಸ್ಪಷ್ಟ ಕಾನೂನುಬಾಹಿರ ಕೃತ್ಯಗಳನ್ನು ಗಮನಿಸಿದರೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಸಿಇಒ ಎ ಮಣಿಮೇಖಲೈ, ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸುಚಿಶಿತಾ ರಾಲ್ , ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕರು ಮತ್ತಿತರರು ಇದರಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ದೂರಿನ ಆಧಾರದ ಮೇಲೆ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಐಡಿ ತಂಡದಿಂದ ಈಗಾಗಲೇ ತನಿಖೆ ನಡೆಸುತ್ತಿರುವ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share