ನಂಜನಗೂಡು:
ಬೇಕರಿಯೊಂದರ ಪೀಠೋಪಕರಣಗಳನ್ನ ಕಿಡಿಗೇಡಿಗಳು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ 7 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ನಂಜನಗೂಡು ತಾಲೂಕು ಹುರಾ ಗ್ರಾಮದಲ್ಲಿ ಬೇಕರಿಯೊಂದರ ಪೀಠೋಪಕರಣಗಳನ್ನ ಧ್ವಂಸ ಮಾಡಿದ್ದ ಆರೋಪದ ಹಿನ್ನಲೆ ನ್ಯಾಯಾಲಯ ನೀಡಿದ ಆದೇಶದಂತೆ FIR ದಾಖಲಿಸಲಾಗಿದೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.ಹುರಾ ಗ್ರಾಮದ ಕಾಡಯ್ಯ,ಶಿವಮೂರ್ತಿ,ಶಶಿಧರ್,ಕುಮಾರ್,ಕಮಾಲ್ ಕುಮಾರ್,ಪ್ರವೀಣ್ ಕುಮಾರ್ ಹಾಗೂ ವರುಣ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಹುರಾ ಗ್ರಾಮದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಯಜಮಾನ ಮಳಿಗೆಗಳನ್ನ ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದರು.ಮಳಿಗೆಗಳಿಂದ ಬಂದ ಆದಾಯವನ್ನ ದೇವಾಲಯದ ಅಭಿವೃದ್ದಿಗೆ ಬಳಸಲಾಗುತ್ತಿತ್ತು.ಈ ವಿಚಾರದಲ್ಲಿ ಗ್ರಾಮದ ಈಗಿನ ಯಜಮಾನ ರಾಜಕೀಯ ವೈಶ್ಯಮ್ಯಕ್ಕೆ ಅಂಗಡಿ ಮಳಿಗೆಗಳನ್ನ ಕೆಲವು ದಿನಗಳ ಹಿಂದೆ ಬಂದ್ ಮಾಡಿಸಿದ್ದರೆಂದು ಹೇಳಲಾಗಿದೆ.ಮಳಿಗೆಗಳಲ್ಲಿ ನಡೆಸಲಾಗುತ್ತಿದ್ದ ಓಂಕಾರ್ ಬೇಕರಿಯ ಟೀ ಕೌಂಟರ್,ಜ್ಯೂಸ್ ಕೌಂಟರ್,ಚಾಟ್ಸ್ ಕೌಂಟರ್,ಟೇಬಲ್ ಗಳು,ಗ್ಲಾಸ್ ಗಳನ್ನ ಧ್ವಂಸ ಮಾಡಿದ್ದಾರೆ.ಅಲ್ಲದೆ ಬೇಕರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ನಾಶ ಮಾಡಿದ್ದಾರೆ.ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಬೇಕರಿ ಮಾಲೀಕ ಪಾಪಣ್ಣ ರವರಿಗೆ 2 ರಿಂದ 3 ಲಕ್ಷ ನಷ್ಟವಾಗಿದೆ ಎಂದು ಆರೋಪಿಸಿ ಸಿಸಿ ಕ್ಯಾಮರಾ ದೃಶ್ಯಗಳ ಸಮೇತ ಪಾಪಣ್ಣ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನಲ್ಲಿ ಕಾಡಯ್ಯ,ಶಿವಮೂರ್ತಿ,ಶಶಿಧರ್ ರವರ ಕುಮ್ಮಕ್ಕಿನಿಂದ ಕುಮಾರ್,ಕಮಾಲ್ ಕುಮಾರ್,ಪ್ರವೀಣ್ ಕುಮಾರ್ ಎಂಬುವರು ಧ್ವಂಸ ಮಾಡಿದ್ದಾರೆಂದು ಉಲ್ಲೇಖಿಸಿದ್ದರು. ಹುಲ್ಲಹಳ್ಳಿ ಠಾಣಾ ಪೊಲೀಸರು ಕೇವಲ ಎನ್.ಸಿ.ಆರ್.ನೀಡಿ ಎಫ್.ಐ.ಆರ್.ದಾಖಲಿಸಲು ನ್ಯಾಯಾಲಯದಿಂದ ಆದೇಶ ತರುವಂತೆ ಹಿಂಬರಹ ನೀಡಿದ್ದರು.ನ್ಯಾಯಾಲಯದ ಮೊರೆ ಹೋದ ಪಾಪಣ್ಣರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.7 ಮಂದಿ ವಿರುದ್ದ ಪ್ರಕರಣ ದಾಖಲಿಸುವಂತೆ ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಸೂಚನೆ ನೀಡಿದೆ.ಈ ಹಿನ್ನಲೆ ಆರೋಪಿಗಳ ವಿರುದ್ದ FIR ದಾಖಲಾಗಿದೆ.