ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿ, ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ವರ್ಚುವಲ್ ನಿರೀಕ್ಷಣಾ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಜಾಮೀನು ಪಡೆಯದಿದ್ದರೂ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್ ಪೂಜಾರ್ ಸಹಕರಿಸಬೇಕು. ಜಾಮೀನು ಅರ್ಜಿ ಸಲ್ಲಿಸಿದ್ದರೆ ಪೊಲೀಸರು ಆಕ್ಷೇಪಿಸಬಾರದು ಎಂದು ಹೈಕೋರ್ಟ್ ಆದೇಶಿಸಿದ ನಂತರ ಎಸ್‌ಐಟಿ ಮೇ 15 ರಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.
ಮೇ 24 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಬೇಲಾ ತ್ರಿವೇದಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠ, ಕರ್ನಾಟಕ ಹೈಕೋರ್ಟ್‌ನ ಮೇ 2 ರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದರೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಮೂಲಕ ಔಪಚಾರಿಕವಾಗಿ ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಪೂಜಾರ್‌ಗೆ ಅನುಮತಿ ನೀಡಿದೆ.ಪೂಜಾರ್ ಅವರು ನಿರೀಕ್ಷಣಾ ಜಾಮೀನು ಪಡೆಯದಿದ್ದರೂ, ಎಸ್‌ಐಟಿ ದಾಖಲಿಸಿದ ಎರಡು ಪ್ರಕರಣಗಳನ್ನು ರದ್ದುಗೊಳಿಸುವಂತೆ ಮತ್ತು ತನಿಖೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಶ್ರೀಧರ್ ಪೂಜಾರ್ ಘೋಷಿತ ಅಪರಾಧಿ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಶ್ರೀಧರ್ ಪೂಜಾರ್ ಅವರು ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.