ಮಡಿಕೇರಿ: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಫಾರಿಗೆ ಬುಕ್ ಮಾಡಲು ಬಯಸುವ ಪ್ರವಾಸಿಗರಿಗೆ ನಕಲಿ ಬುಕ್ಕಿಂಗ್ ವೆಬ್‌ಸೈಟ್ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆನ್‌ಲೈನ್ ಬುಕಿಂಗ್ ಮಾಡಿದ್ದ ಹಲವು ಪ್ರವಾಸಿಗರು ಹಣ ಕಳೆದುಕೊಂಡಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು https://www.nagaraholetigerreserve.com/ ಅಧಿಕೃತ ವೆಬ್‌ಸೈಟ್ ಆಗಿದ್ದು, ಪ್ರವಾಸಿಗರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಫಾರಿಗೆ ಬುಕ್ ಮಾಡಬಹುದು ಎಂದು ಹೇಳಿದ್ದಾರೆ. ಬಸ್ ಸಫಾರಿಗೆ ತಲಾ 610 ರೂ., ಜೀಪ್ ಸಫಾರಿಗೆ 850 ರೂಪಾಯಿ ಇದ್ದು, 7,500 ರೂಪಾಯಿ ಪಾವತಿಸುವ ಮೂಲಕ ಸಂಪೂರ್ಣ ಜೀಪ್ ಅನ್ನು ಬುಕ್ ಮಾಡಬಹುದು.
ನಕಲಿ ವೆಬ್‌ಸೈಟ್
ಆದರೆ, ಆನ್‌ಲೈನ್‌ನಲ್ಲಿ ನಾಗರಹೊಳೆ ಬುಕಿಂಗ್ ಸೈಟ್ ಅನ್ನು ಹುಡುಕಿದಾಗ ಮತ್ತೊಂದು ನಕಲಿ ವೆಬ್‌ಸೈಟ್ ಕಾಣಿಸಿಕೊಳ್ಳುತ್ತಿದೆ. https://www.nagaraholenationalparkonline.in ಎಂಬ ನಕಲಿ ವೆಬ್‌ಸೈಟ್ ಹಲವು ಪ್ರವಾಸಿಗರನ್ನು ವಂಚಿಸಿದೆ.
ಆನ್‌ಲೈನ್ ಪಾವತಿ ಮಾಡಿದ ನಂತರ ಪ್ರವಾಸಿಗರು ಈ ನಕಲಿ ವೆಬ್‌ಸೈಟ್ ಮೂಲಕ ತಮ್ಮ ಸ್ಲಾಟ್‌ಗಳನ್ನು ಕಾಯ್ದಿರಿಸಿದ್ದರೂ ಯಾವುದೇ ದೃಢೀಕರಣ ಚೀಟಿಯನ್ನು ಸ್ವೀಕರಿಸಿಲ್ಲ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳು ಕೊಡಗು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರೂ ಸಹ ಈ ಆನ್‌ಲೈನ್ ಬುಕಿಂಗ್ ಹಗರಣದಿಂದ ಅನೇಕ ಪ್ರವಾಸಿಗರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್‌ಸೈಟ್ ಕುರಿತು ವರದಿಯಾಗಿದ್ದು ಅದನ್ನು ತೆಗೆದುಹಾಕಲಾಗಿದೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ. ಆದಾಗ್ಯೂ, ಮತ್ತೊಂದು ವೆಬ್‌ಸೈಟ್ ಈಗ ಪಾಪ್ ಅಪ್ ಆಗಿದ್ದು, ಅದು ನವದೆಹಲಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ. ಪ್ರವಾಸಿಗರು ತಮ್ಮ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ಮೊದಲು ವೆಬ್‌ಸೈಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎಚ್ಚರಿಸಲಾಗಿದೆ.