ಮಡಿಕೇರಿ: ಕೊಡಗಿನಲ್ಲಿ ಕಾಡಾನೆಯೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಕುಶಾಲನಗರ ತಾಲೂಕಿನ ಕೊಡಗರಹಳ್ಳಿಯಲ್ಲಿ ಘಟನೆ ನಡೆದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಹಾನಿಗೊಳಗಾದ ವಿದ್ಯುತ್ ಕಂಬದ ಪಕ್ಕ ಸುಮಾರು 10 ರಿಂದ 12 ವರ್ಷ ಪ್ರಾಯದ ಆನೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ವಿದ್ಯುತ್ ಕಡಿತದ ಬಗ್ಗೆ ಸ್ಥಳೀಯರು ಇಲಾಖೆಗೆ ಕರೆ ಮಾಡಿದ್ದು ಈ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಸರಿಪಡಿಸಲು ಸೆಸ್ಕ್ ಇಲಾಖೆ ಸಿಬ್ಬಂದಿ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.ವಿದ್ಯುತ್ ಕಂಬದ ಮೇಲೆ ಕೆಲವು ಗುರುತು ಕಂಡುಬಂದಿದ್ದು, ಆನೆಯೇ ಕಂಬಕ್ಕೆ ಒದ್ದಿರಬಹುದು ಎಂದು ಶಂಕಿಸಲಾಗಿದೆ. ಆನೆ ವಿದ್ಯುತ್ ಕಂಬವನ್ನು ಮುರಿದಾಗ ಆನೆಗೆ ವಿದ್ಯುತ್ ಪ್ರವಹಿಸಿರಬಹುದು ಎನ್ನಲಾಗಿದೆ. ಮೇಲ್ನೋಟಕ್ಕೆ ಆನೆ ಕಂಬವನ್ನು ಹಾನಿಗೊಳಿಸಿದ್ದರಿಂದ ಅದರ ಸಾವಿಗೆ ಕಾರಣವಾದಂತೆ ತೋರುತ್ತಿದೆ.ಈ ಮಧ್ಯೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಲಂ 9ರ ಅಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಮಡಿಕೇರಿ ಡಿಸಿಎಫ್ ಭಾಸ್ಕರ್ ಖಚಿತಪಡಿಸಿದ್ದಾರೆ. ಒಂದು ವಾರದ ಅವಧಿಯಲ್ಲಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶಿಸಿದ ಎರಡನೇ ಕಾಡಾನೆ ಇದಾಗಿದೆ.