ಕೋಲ್ಕತ್ತಾ: ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳದಲ್ಲಿ CAA ಜಾರಿಯಾಗಲು ಬಿಡುವುದಿಲ್ಲ ಎಂಬ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಬಂಗಾಳದಲ್ಲಿ ಪೌರತ್ವ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಸಿಎಎ ಅಡಿಯಲ್ಲಿ ಬಂಗಾಳದಿಂದ ಮೊದಲ ಹಂತದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದವರಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡಿತು. ಪಶ್ಚಿಮ ಬಂಗಾಳದ ಹೊರತಾಗಿ, ಹರಿಯಾಣ ಮತ್ತು ಉತ್ತರಾಖಂಡದ ಮೊದಲ ಗುಂಪಿನ ಅರ್ಜಿದಾರರಿಗೂ ಇಂದು ಪೌರತ್ವವನ್ನು ನೀಡಲಾಯಿತು. ಅಂತೆಯೇ, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳ ಅಧಿಕಾರ ಸಮಿತಿಗಳು ಪೌರತ್ವ (ತಿದ್ದುಪಡಿ) ನಿಯಮಗಳು, 2024ರ ಅಡಿಯಲ್ಲಿ ತಮ್ಮ ರಾಜ್ಯಗಳಲ್ಲಿ ಅರ್ಜಿದಾರರ ಮೊದಲ ಗುಂಪಿಗೆ ಇಂದು ಪೌರತ್ವವನ್ನು ನೀಡಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.ಇದಕ್ಕೂ ಮೊದಲು, 2024ರ ಮೇ 15ರಂದು ಕೇಂದ್ರ ಗೃಹ ಕಾರ್ಯದರ್ಶಿಯವರು ದೆಹಲಿಯ ಸಶಕ್ತ ಸಮಿತಿಯು ಒದಗಿಸಿದ ಪೌರತ್ವ ಪ್ರಮಾಣಪತ್ರಗಳ ಮೊದಲ ಸೆಟ್ ಅನ್ನು ವಿತರಿಸುವ ಮೂಲಕ ಸಿಎಎ ಅನುಷ್ಠಾನಕ್ಕೆ ಮುನ್ನುಡಿ ಬರೆದಿತ್ತು. ಕೇಂದ್ರ ಸರ್ಕಾರದ ಪ್ರಕಾರ, ಪೌರತ್ವಕ್ಕಾಗಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಪರಿಶೀಲಿಸಲಾಗುತ್ತದೆ. ಕೇಂದ್ರ ಸರ್ಕಾರವು ಮಾಡಿದ ಈ ನಿಯಮಗಳ ಅಡಿಯಲ್ಲಿ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ಏಪ್ರಿಲ್ ನಲ್ಲಿ ‘ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ನನಗೆ ಎಲ್ಲ ಧರ್ಮಗಳ ನಡುವೆ ಸಾಮರಸ್ಯ ಬೇಕು. ನಿಮ್ಮ ಸುರಕ್ಷತೆ ಬೇಕು ಎಂದು ಹೇಳಿದ್ದರು. ಈದ್ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ, ಯುಸಿಸಿ, ಎನ್‌ಆರ್‌ಸಿ ಮತ್ತು ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.