ತುಮಕೂಕು: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ, ಆಕೆಯ ತಲೆಯನ್ನು ಕಡಿದು ಚರ್ಮ ಸುಲಿದ ಭೀಕರ ಘಟನೆ ನಡೆದಿದೆ.
ಹುಲಿಯೂರುದುರ್ಗದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕತ್ತು ಕತ್ತರಿಸಿ ಕೊಂದ ನಂತರ ಇಡೀ ರಾತ್ರಿ ದೇಹದ ಚರ್ಮ ಸುಲಿದು, ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಪುಷ್ಪಾ (35) ಹತ್ಯೆಯಾದ ಮಹಿಳೆ. ಕೊಲೆ ಆರೋಪದ ಮೇಲೆ ಪತಿ ಶಿವರಾಮನನ್ನು ಪೊಲೀಸರು ಬಂಧಿಸಿದ್ದಾರೆ
ಸೋಮವಾರ ರಾತ್ರಿ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಮಿಲ್ ಕಾರ್ಖಾನೆಯ ಕಾರ್ಮಿಕ ಶಿವರಾಮ ಪತ್ನಿ ಪುಷ್ಪಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಆಕೆಯ ತಲೆಯನ್ನು ಮಚ್ಚಿನಿಂದ ತುಂಡರಿಸಿ, ಆಕೆಯ ದೇಹದ ಕೆಲವು ಭಾಗಗಳನ್ನು ಕತ್ತರಿಸಿ, ಬೆಳಗಾಗುವವರೆಗೂ ದೇಹವನ್ನು ಚರ್ಮ ಸುಲಿದಿದ್ದಾನೆ. ಮಂಗಳವಾರ ಬೆಳಗಿನ ಜಾವ ಶಿವರಾಮ ತಾನು ಕೆಲಸ ಮಾಡುತ್ತಿದ್ದ ಸಾಮಿಲ್ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪಅನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯ ಭೀಕರ ಹತ್ಯೆಯ ವೇಳೆ ದಂಪತಿಯ ಎಂಟು ವರ್ಷದ ಮಗ ಮಲಗಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಅಪರಾಧದ ದೃಶ್ಯವನ್ನು ನೋಡಿದ ಅವರು ಆಘಾತಕ್ಕೊಳಗಾಗಿದ್ದಾರೆ, ನಂತರ ಅವರು ಆರೋಪಿಯನ್ನು ಬಂಧಿಸಿದ್ದಾರೆ.ನನ್ನ 25 ವರ್ಷಗಳ ಸೇವಾವಧಿಯಲ್ಲಿ ಇಂತಹ ಅಮಾನುಷ ಕೃತ್ಯವನ್ನು ನೋಡಿಲ್ಲ ಎಂದು ಅಮೃತೂರು ಪೊಲೀಸ್ ಇನ್ಸ್‌ಪೆಕ್ಟರ್ ಮದ್ಯಾ ನಾಯ್ಕ್ ಹೇಳಿದ್ದಾರೆ. ದೇಹ ವಿರೂಪಗೊಂಡ ಕಾರಣ ಬಾಲಕನಿಗೆ ತನ್ನ ತಾಯಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಶಾಲೆಗೆ ಸೇರಿಸಲು ಕರೆದುಕೊಂಡು ಹೋಗುವುದಾಗಿ ಮಗನಿಗೆ ಭರವಸೆ ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್ ಕೆ ವಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆರೋಪಿಯು ಸುಗ್ಗನಹಳ್ಳಿ ಗ್ರಾಮದವನಾಗಿದ್ದು, ಸಂತ್ರಸ್ತೆ ಶಿವಮೊಗ್ಗ ಜಿಲ್ಲೆಯ ಸಾಗರದವಳು. ಅವರು ಕೆಲಸದ ಸ್ಥಳದಲ್ಲಿ ಭೇಟಿಯಾದರು ಮತ್ತು 10 ವರ್ಷಗಳ ಹಿಂದೆ ವಿವಾಹವಾದರು.
ಒಂದೆರಡು ವರ್ಷಗಳ ಹಿಂದೆ ಹುಲಿಯೂರುದುರ್ಗದ ಹೊಸಪೇಟೆ ಎಕ್ಸ್‌ಟೆನ್ಶನ್‌ಗೆ ಸ್ಥಳಾಂತರಗೊಳ್ಳುವ ಮೊದಲು ಅವರು ಕೆಲವು ವರ್ಷಗಳ ಕಾಲ ಬೆಂಗಳೂರು ಮತ್ತು ಕುಣಿಗಲ್‌ನಲ್ಲಿದ್ದರು. ನಿರಂತರವಾಗಿ ಜಗಳವಾಡುತ್ತಿದ್ದರಿಂದ ಅವರ ಸಂಬಂಧ ಹಳಸಿತು ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆ ತನ್ನ ಪರಿಚಯಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರಿಂದ ಆರೋಪಿ ಆಕೆಯ ಶೀಲದ ಮೇಲೆ ಅನುಮಾನ ವ್ಯಕ್ತ ಪಡಿಸುತ್ತಿದ್ದ ಎನ್ನಲಾಗಿದೆ.