ಬಾಗಲಕೋಟೆ: ಹೆಣ್ಣು ಭ್ರೂಣ ಹತ್ಯೆಯ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ವರದಿಯಾಗಿದ್ದು, ಗರ್ಭಪಾತಕ್ಕೆ ಒಳಗಾಗುವ ವೇಳೆ ಮಂಗಳವಾರ ಗರ್ಭಿಣಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.
ಘಟನೆಯನ್ನು ಮರೆಮಾಚುವ ಉದ್ದೇಶದಿಂದ ಮಹಿಳೆಯ ಕುಟುಂಬವು ಆಕೆಯ ಶವವನ್ನು ಕಾರಿನಲ್ಲಿ ಮಹಾರಾಷ್ಟ್ರದ ಅವರ ಸ್ವಂತ ಪಟ್ಟಣವಾದ ಸಾಂಗ್ಲಿಗೆ ಸಾಗಿಸುತ್ತಿದ್ದಾಗ, ಮಹಾರಾಷ್ಟ್ರ ಪೊಲೀಸರು ಗಡಿಯಲ್ಲಿ ವಾಹನವನ್ನು ತಡೆದಿದ್ದಾರೆ. ಹೆಣ್ಣು ಭ್ರೂಣ ಹತ್ಯೆಯ ಸಮಯದಲ್ಲಿ ಮಹಿಳೆ ಸಾವಿಗೀಡಾಗಿರುವುದನ್ನು ಮರೆಮಾಚಲು ಆಕೆಯ ಮೃತದೇಹವನ್ನು ಸಾಂಗ್ಲಿಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಸೋನಾಲಿ (33) ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮತ್ತೊಂದು ಹೆಣ್ಣು ಮಗುವನ್ನು ಹೊಂದಲು ಆಕೆಯ ಕುಟುಂಬವು ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ, ತಮಗೆ ಹುಟ್ಟಲಿರುವ ಮಗುವಿನ ಲಿಂಗವನ್ನು ಪತ್ತೆಹಚ್ಚಲು ಸೋನಾಲಿ ಪ್ರಸವಪೂರ್ವ ಪರೀಕ್ಷೆಗೆ ಒಳಗಾಗಿದ್ದರು. ನಂತರ ಸಾಂಗ್ಲಿಯಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಲು ನಿರ್ಧರಿಸಿದರು.
ಮಹಾಲಿಂಗಪುರದ ಮನೆಯೊಂದರಲ್ಲಿ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಗರ್ಭಪಾತದ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸೋನಾಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಕೆಯ ಕುಟುಂಬದವರು ಆಕೆಯ ಶವವನ್ನು ಮೀರಜ್ ಮೂಲಕ ಸಾಂಗ್ಲಿಗೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದಾಗ, ಮಹಾರಾಷ್ಟ್ರ ಪೊಲೀಸರ ತಂಡವು ಕಾರನ್ನು ತಡೆದು ಪರಿಶೀಲಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ. ವಿಚಾರಣೆ ವೇಳೆ, ಹೆಣ್ಣು ಭ್ರೂಣ ಹತ್ಯೆಯ ಪ್ರಕ್ರಿಯೆಯಲ್ಲಿ ಮಹಿಳೆ ಸಾವಿಗೀಡಾಗಿರುವುದಾಗಿ ಕುಟುಂಬದವರು ಒಪ್ಪಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಬದನವರ್, ವಿಜಯ್ ಗೌಳಿ ಮತ್ತು ಮಾರುತಿ ಬಾಬಾಸೊ ಖಾರತ್ ಎಂಬುವವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಮೂವರು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ಲಿಯ ವೈದ್ಯರನ್ನು ಸಹ ಬಂಧಿಸಲಾಗಿದೆ ಮತ್ತು ಪ್ರಕರಣದ ತನಿಖೆಯ ಭಾಗವಾಗಿ ಸಾಂಗ್ಲಿ ಪೊಲೀಸರ ತಂಡವು ಮಹಾಲಿಂಗಪುರದಲ್ಲಿದೆ ಎಂದು ಸಾಂಗ್ಲಿಯ ಹಿರಿಯ ಪೊಲೀಸ್ ಅಧಿಕಾರಿ ಅಣ್ಣಾಸಾಹೇಬ್ ಜಾಧವ್ ಹೇಳಿದ್ದಾರೆ.