ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ತಮಗೆ ಇದ್ದಕ್ಕಿದ್ದಂತೆ ಕಿವಿ ಕೇಳಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದರು. “ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನಗೆ ಏನೂ ಕೇಳಿಸುತ್ತಿಲ್ಲ ಎಂಬುದು ತಿಳಿಯಿತು. ಈ ರೀತಿ ಸಮಸ್ಯೆ ಆಗಿದೆ ಎಂಬುದನ್ನು ವೈದ್ಯರು ತಿಳಿಸಿದರು. ನನಗೆ ತಿಳಿಯದಂತೆಯೇ ಈ ರೀತಿ ಆಗಿದೆ. ನಾನು ಇದರಿಂದ ಗುಣಮುಖವಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ನನಗಾಗಿ ಪ್ರಾರ್ಥಿಸಿ. ಹೆಡ್‌ಫೋನ್ ಅಥವಾ ಇತರೆ ಸಾಧನಗಳ ಮೂಲಕ ಜೋರಾದ ಶಬ್ದವನ್ನು ಕೇಳಿಸಿಕೊಳ್ಳಬೇಡಿ.” ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟಿನ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸಂವೇದನಾಶೀಲ ಶ್ರವಣ ದೋಷ ಎಂದರೇನು?
ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಅಲ್ಕಾ ಯಾಗ್ನಿಕ್ ಅವರು ಸಂವೇದನಾಶೀಲ ಶ್ರವಣ ದೋಷದಿಂದ (Sensorineural Hearing Loss) ಬಳಲುತ್ತಿದ್ದಾರೆ. ಸಂವೇದನಾಶೀಲ ಶ್ರವಣ ನಷ್ಟ ಒಳಗಿವಿಯ ಸಮಸ್ಯೆಯಾಗಿದೆ. ಈ ಸಮಸ್ಯೆಯಾದಾಗ ಕಾಕ್ಲಿಯಾ ಅಥವಾ ಮೆದುಳಿಗೆ ಧ್ವನಿಯನ್ನು ಕೊಂಡೊಯ್ಯುವ ಶ್ರವಣೇಂದ್ರಿಯ ನರವನ್ನು ಜೋಡಿಸುವ ಸಣ್ಣ ರೋಮಕೋಶಗಳಿಗೆ ಹಾನಿಯಾಗುತ್ತದೆ. ವಯಸ್ಸಾದ ಕಾರಣ ಕ್ರಮೇಣ ಅಥವಾ ರಾತ್ರೋರಾತ್ರಿ ಅರೋಗ್ಯವಂತರಾಗಿ ಇರುವವರಿಗೂ ಇದು ಸಂಭವಿಸಬಹುದು. ಈ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸಬೇಕು. ಈ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಒಂದು ಕಿವಿಯಲ್ಲಿ ಏನೂ ಕೇಳುವುದಿಲ್ಲ. ನಂತರ ನಿಧಾನವಾಗಿ ಕಿವುಡುತನ ಆವರಿಸಿಕೊಳ್ಳುತ್ತದೆ.
SSNHL ಗೆ ಕಾರಣವೇನು?
ಸಂವೇದನಾಶೀಲ ಶ್ರವಣ ದೋಷ ಸಾಮಾನ್ಯವಾಗಿ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ವೈರಸ್ ಶ್ರವಣ (ಕಾಕ್ಲಿಯರ್) ನರಗಳ ಮೇಲೆ ನೇರ ಆಕ್ರಮಣ ಮಾಡಿದಾಗ ಮತ್ತು ಸೋಂಕಿನಿಂದ ಉಂಟಾಗುವ ಉರಿಯೂತದಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಇಂತಹ ಸಮಸ್ಯೆ ಕಂಡುಬರುವುದಿಲ್ಲ. ಕಡಿಮೆ ಇದ್ದರೆ ಸಮಸ್ಯೆಯಾಗಬಹುದು. ಈ ರೀತಿಯ ಶ್ರವಣ ನಷ್ಟವು ಸಾಮಾನ್ಯವಾಗಿ ಶಾಶ್ವತವಾಗಿರುತ್ತದೆ ಮತ್ತು ಸೌಮ್ಯತೆಯಿಂದ ತೀವ್ರತೆಯ ತನಕ ಬದಲಾಗಬಹುದು.SSNHL ಬಾಧಿತರಿಗೆ ಚಿಕಿತ್ಸೆಯ ಆಯ್ಕೆಗಳೇನು?
ಈ ಸಮಸ್ಯೆಯ ಲಕ್ಷಣ ಹಠಾತ್ತಾಗಿ ಒಂದು ಕಿವಿ ಕೇಳಿಸದೇ ಇರುವುದು; ಕೆಲವರಿಗೆ ಅಪರೂಪಕ್ಕೆ ಎರಡೂ ಕಿವಿಗಳು ಕೇಳಿಸದೇ ಇರಬಹುದು; ಕಿವಿಯಲ್ಲಿ ಒಂದು ರೀತಿಯ ಶಬ್ದ ಕೇಳಿಸುವುದು (ಟಿನ್ನಿಟಸ್) ಮತ್ತು ತಲೆತಿರುಗುವ ಅನುಭವ ಉಂಟಾಗುವುದು. ಹೀಗಾದಾಗ ತಡಮಾಡದೇ ವೈದ್ಯರನ್ನು ಕಾಣಬೇಕು. ರೋಗ ಲಕ್ಷಣಗಳ ಆಧಾರದ ಮೇಲೆ ಸಂವೇದನಾಶೀಲ ಶ್ರವಣ ದೋಷದ ಸಮಸ್ಯೆ ಇದೆ ಎಂದು ಕಿವಿ, ಮೂಗು ಮತ್ತು ಗಂಟಲು ವೈದ್ಯರು ನಿರ್ಧರಿಸುತ್ತಾರೆ. ರೋಗಿಯ ಪ್ರತಿಕ್ರಿಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸೂಕ್ತ ಮಾತ್ರೆ ಮತ್ತು ಚುಚ್ಚುಮದ್ದುಗಳ ಮೂಲಕ ಸಾಕಷ್ಟು ಮಟ್ಟಿಗೆ ಈ ಸಮಸ್ಯೆಯ ಪರಿಹಾರ ಸಾಧ್ಯವಿದೆ. ಹಲವು ರೋಗಿಗಳು ಕೆಲವು ದಿನಗಳಲ್ಲಿ ಈ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಾರೆ. ಕೆಲವು ರೋಗಿಗಳು ಮಾತ್ರ ಶಾಶ್ವತ ಅಥವಾ ದೀರ್ಘಕಾಲದ ಶ್ರವಣ ನಷ್ಟಕ್ಕೆ ಒಳಗಾಗುತ್ತಾರೆ. ಶಾಶ್ವತ ಶ್ರವಣದೋಷ ಉಂಟಾದರೆ ರೋಗಿಗಳಿಗೆ ಶ್ರವಣ ಸಾಧನವನ್ನು ನೀಡಬಹುದು ಅಥವಾ ಕಾಕ್ಲಿಯಾರ್ ಇಂಪ್ಲಾಂಟ್ ಸರ್ಜರಿ ಮಾಡಬಹುದು.
ಸಂವೇದನಾಶೀಲ ಶ್ರವಣ ದೋಷ ಬರದಂತೆ ಇರಲು ಮುನ್ನೆಚ್ಚರಿಕೆ ಅಗತ್ಯ
ಕೋವಿಡ್ ಮಹಾಮಾರಿ ಬಂದು ಹೋದ ನಂತರ ವೈರಲ್ ಸೋಂಕುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ವೈರಲ್ ಸೋಂಕು ಬರದಂತೆ ನಾವು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು (ಮಾಸ್ಕ್) ಧರಿಸಬೇಕು. ಜನರಿರುವ ಸ್ಥಳಗಳಿಗೆ ಹೋದಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹೆಚ್ಚು ಹೊತ್ತು ಮನಸೋಇಚ್ಛೆ ಸಂಗೀತ ಕೇಳಲು/ವಿಡಿಯೋ/ಫಿಲ್ಮ ನೋಡಲು ಹೆಡ್ ಫೋನ್/ಇಯರ್ ಫೋನ್‌ಗಳನ್ನು ಬಳಕೆ ಮಾಡಬೇಡಿ. ಹೆಡ್‌ಫೋನ್ ಅಥವಾ ಇಯರ್‌ಫೋನ್‌ಗಳನ್ನು ಬಳಸುವಾಗ ವಾಲ್ಯೂಮನ್ನು ಸುರಕ್ಷಿತ ಮಟ್ಟದಲ್ಲಿ ಇರಿಸಿ. ಒಮ್ಮೆಗೆ 60 ನಿಮಿಷಗಳಿಗಿಂತ ಹೆಚ್ಚು ಕಾಲ 60%ಕ್ಕಿಂತ ಹೆಚ್ಚು ಪ್ರಮಾಣದ ವಾಲ್ಯೂಮ್ ಇಟ್ಟು ಸಂಗೀತ ಕೇಳಬೇಡಿ. ಗದ್ದಲದ ಪರಿಸರದಲ್ಲಿ ಕಿವಿಗೆ ಆಗಬಹುದಾದ ಅಪಾಯ ತಪ್ಪಿಸಲು ಇಯರ್‌ಪ್ಲಗ್‌ಗಳನ್ನು ಬಳಸಿ. ಜೋರಾದ ಶಬ್ದಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳು ಶ್ರವಣದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಹೃದಯರಕ್ತನಾಳದ ಆರೋಗ್ಯವು ಉತ್ತಮ ಶ್ರವಣದೊಂದಿಗೆ ಸಂಬಂಧ ಹೊಂದಿದೆ. ನಿಯಮಿತ ವ್ಯಾಯಾಮವು ಕಿವಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಂದ ಶ್ರವಣ ಶಕ್ತಿ ಚೆನ್ನಾಗಿರುತ್ತದೆ. ಸೋಂಕುಗಳನ್ನು ತಡೆಗಟ್ಟಲು ನಿಮ್ಮ ಕಿವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಕಿವಿಗೆ ಯಾವುದೇ ವಸ್ತುಗಳನ್ನು ಹಾಕಬೇಡಿ.
ಕಿವಿಯಲ್ಲಿ ಏನೇ ತೊಂದರೆಯಾದರೂ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮಸ್ಯೆಯ ಆರಂಭಿಕ ಪತ್ತೆಯು ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಧೂಮಪಾನವು ಒಳಗಿನ ಕಿವಿಗೆ ರಕ್ತದ ಹರಿವನ್ನು ಕುಂಠಿತಗೊಳಿಸುತ್ತದೆ ಮತ್ತು ಶ್ರವಣ ನಷ್ಟದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಧೂಮಪಾನ ತ್ಯಜಿಸುವುದು ಒಳಿತು. ಈ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಂವೇದನಾಶೀಲ ಶ್ರವಣ ನಷ್ಟವನ್ನು ಕಡಿಮೆ ಮಾಡಬಹುದು.