ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ಮುಂದಿನ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಹಲವು ವಿದೇಶಿ ದಿಗ್ಗಜ ಆಟಗಾರರ ಹೆಸರು ಕೂಡ ಕೋಚ್ ಹುದ್ದೆಗೆ ಕೇಳಿ ಬಂದಿದ್ದವು. ಕೆಕೆಆರ್ ತಂಡದ ಮೆಂಟರ್ ಆಗಿರುವ, ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹೆಸರು ಬಲವಾಗಿ ಕೇಳಿಬಂದಿದೆ.ಈ ಬಾರಿ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಮೆಂಟರ್ ಸ್ಥಾನ ವಹಿಸಿಕೊಂಡ ಗಂಭೀರ್ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. 2024 ರ ಮೊದಲು, ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದರು. ಕೆಎಲ್ ರಾಹುಲ್ ನೇತೃತ್ವದ ತಂಡ ಗಂಭೀರ್ ನಾಯಕತ್ವದಲ್ಲಿ ಸತತ ಎರಡು ಆವೃತ್ತಿಗಳಲ್ಲಿ ಐಪಿಎಲ್ ಪ್ಲೇ-ಆಫ್ ಪ್ರವೇಶಿಸಿದೆ. ಇದು ಬಿಸಿಸಿಐ ಗಂಭೀರ್ ಹೆಸರನ್ನು ಪರಿಗಣಿಸಲು ಮತ್ತೊಂದು ಬಲವಾದ ಕಾರಣವಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಯ್ಕೆಯ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಧಿಕೃತ ಗಡುವು ಮುಗಿದಿದೆ. ಭಾರತದ ಮುಂದಿನ ಕೋಚ್ ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನಾಂಕವಾಗಿತ್ತು.
ಇತ್ತೀಚಿನ ವರದಿಗಳ ಪ್ರಕಾರ ಗೌತಮ್ ಗಂಭೀರ್ ಅವರೇ ಭಾರತದ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಅವರನ್ನು ಭಾರತ ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಮೂರನೇ ಬಾರಿಗೆ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ತಾವು ಆಸಕ್ತಿ ಹೊಂದಿಲ್ಲ ಎಂದು ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದರೆ, ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತಹ ಆಸ್ಟ್ರೇಲಿಯಾದ ಮಾಜಿ ಆಟಗಾರರು ಮುಖ್ಯ ಕೋಚ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಈ ವರದಿಗಳ ಬೆನ್ನಲ್ಲೇ, ‘ನಾನಾಗಲೀ ಅಥವಾ ಬಿಸಿಸಿಐ ಆಗಲಿ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಮುಖ್ಯ ಕೋಚ್ ಹುದ್ದೆಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಜಯ್ ಶಾ ಕಳೆದ ವಾರ ತಳ್ಳಿಹಾಕಿದ್ದರು.’ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರರನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ನಾವು ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಉನ್ನತ ಮಟ್ಟಕೇರಿದ ವ್ಯಕ್ತಿಗಳನ್ನು ಗುರುತಿಸುವತ್ತ ಗಮನಹರಿಸಿದ್ದೇವೆ’ ಎಂದಿರುವ ಅವರು ದ್ರಾವಿಡ್ ಅವರ ಉತ್ತರಾಧಿಕಾರಿಯು ಭಾರತೀಯರೇ ಆಗಿರಬೇಕೆಂಬ ಸುಳಿವು ನೀಡಿದರು.