ಬೆಂಗಳೂರು: ರೈಲು ಬೋಗಿಯಲ್ಲಿರುವ ಕಸದ ಬುಟ್ಟಿಯಲ್ಲಿ ನವಜಾತ ಶಿಶುವೊಂದನ್ನು ಎಸೆದಿದ್ದು, ಮಗು ಅಲ್ಲಿಯೇ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.
ಭುವನೇಶ್ವರದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸಪ್ರೆಸ್ ರೈಲಿನ ಕಸದ ಬುಟ್ಟಿಯಲ್ಲಿ ನವಜಾತ ಗಂಡು ಮಗು ಪತ್ತೆಯಾಗಿದೆ. ಜೂನ್ 26ರಂದು ಮುಂಜಾನೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಗು ಜನಿಸಿದ ನಾಲ್ಕೈದು ಗಂಟೆಯಲ್ಲೇ ಪ್ರಾಣಬಿಟ್ಟಿದೆ. ಗಂಡು ಮಗುವನ್ನು ಕಸದ ಬುಟ್ಟಿಯಲ್ಲಿ ಹಾಕಿ ಪರಾರಿಯಾಗಿದ್ದಾರೆ. ಮಹಿಳೆಗೆ ರೈಲಿನಲ್ಲಿಯೇ ಹೆರಿಗೆಯಾಗಿದ್ದು, ಬಿಳಿ ಬಟ್ಟೆಯಲ್ಲಿ ನವಜಾತ ಗಂಡು ಮಗುವನ್ನು ಸುತ್ತಿ ಡಸ್ಟ್ ಬಿನ್ಗೆ ಹಾಕಿ ಹೋಗಿದ್ದಾಳೆ ಎನ್ನಲಾಗಿದೆ.
ಕಸದ ಬುಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಕಂಡು ಪ್ರಯಾಣಿಕರು ಆಘಾತಕ್ಕೆ ಒಳಗಾಗಿದ್ದಾರೆ.ಪ್ರಯಾಣಿಕರ ಮಾಹಿತಿಯಿಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಜಾತ ಶಿಶುವನ್ನ ಶವಾಗಾರಕ್ಕೆ ರವಾನಿಸಿ ಯಶವಂತಪುರ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೈಲು ಬೆಳಗ್ಗೆ 11 ಗಂಟೆ ಸುಮಾರಿಗೆ ಯಲಹಂಕ ತಲುಪಿದಾಗ, ಪೊಲೀಸರು ಭ್ರೂಣವನ್ನು ಹೊರತೆಗೆದು ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಿದರು. ಸ್ವಲ್ಪ ಸಮಯದ ನಂತರ ರೈಲು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
ಯಾರು ಕೃತ್ಯ ಎಸಗಿದ್ದರೂ ತಕ್ಷಣ ಗುರುತಿಸುವುದು ತುಂಬಾ ಕಷ್ಟ. ನಾವು ರೈಲು ಕಾರ್ಯಾಚರಣೆಯನ್ನು ತಡೆಹಿಡಿಯಲಾಗುವುದಿಲ್ಲ. ಇದರಿಂದ ಉಳಿದ ರೈಲುಗಳ ಕಾರ್ಯಾಚರಣೆಗೆ ಸಮಸ್ಯೆ ಎದುರಾಗಲಿದೆ ಎಂದು ಅಧಿಕಾರಿಗಳು ಹೇಳಿದರು.