ಅಫಜಲಪುರ:- ಪಟ್ಟಣದಿಂದ 4 ಕಿಮೀ.ದೂರದಲ್ಲಿ ತಹಸೀಲ್ ಕಚೇರಿ ಸ್ಥಳಾಂತರ ಮಾಡುವುದರಿಂದ ವೃದ್ಧರಿಗೆ, ಅಂಗವಿಕಲಕರಿಗೆ, ರೈತರಿಗೆ ಮತ್ತು ಸಾರ್ವಜನಿಕರಿಗೆ ಕಚೇರಿಗೆ ಹೋಗಿ ಬರಲು ಸಾಕಷ್ಟು ತೊಂದರೆ ಆಗುತ್ತದೆ.ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ಈಗಿರುವ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಈರಣ್ಣ ಪಂಚಾಳ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಹಸೀಲ್ ಸ್ಥಳಾಂತರಕ್ಕೆ ಈಗಾಗಲೇ ನಿರ್ಧರಿಸಿ ಪಟ್ಟಣದಿಂದ 4 ಕಿಮೀ ದೂರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದು,ಇದಕ್ಕೆ ಪಟ್ಟಣದ ಮತ್ತು ತಾಲೂಕಿನ ಪ್ರಜ್ಞಾವಂತ ನಾಗರಿಕರಿಂದ ವಿರೋಧವಿದೆ. ಈಗಿರುವ ತಹಸೀಲ್ ಕಚೇರಿಗೆ 3 ಎಕರೆ 20 ಗುಂಟೆ ಜಮೀನು ಇದೆ. ಅದರಲ್ಲಿ ಕೇವಲ 20 ಗುಂಟೆ ಜಾಗದಲ್ಲಿ ತಹಸೀಲ್ ಕಚೇರಿ ನಿರ್ಮಾಣ ಮಾಡಿದ್ದಾರೆ. ಉಳಿದ ಜಾಗವು ಖಾಲಿ ಇದ್ದು,ಅದರಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬಹುದಿತ್ತು,ಆದರೆ ಏಕಾಏಕಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡದೆ ಕಲಬುರಗಿ ರಸ್ತೆ ಮಾರ್ಗದಲ್ಲಿ ಪಟ್ಟಣದಿಂದ 4 ಕಿಮೀ ದೂರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ಅವಶ್ಯಕತೆ ಇರಲಿಲ್ಲ, ಹೀಗಾಗಿ ತಕ್ಷಣ ತಹಸೀಲ್ ಸ್ಥಳಾಂತರದ ಕೆಲಸ ನಿಲ್ಲಿಸಿ ಇದ್ದ ಜಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡಬೇಕು, ಹೊಸ ಕಟ್ಟಡ ನಿರ್ಮಾಣದಲ್ಲಿ ಬೇರೆ ಯಾವ ಇಲಾಖೆಗಾದರೂ ಜಾಗ ಕೊಡಿ ನಮ್ಮದೇನು ತಕರಾರಿಲ್ಲ. ದಿನನಿತ್ಯ ಸಾರ್ವಜನಿಕರು ತಹಸೀಲ್ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ, ಒಂದು ಬಾರಿ ತಹಸೀಲ್ ಕಚೇರಿಗೆ ಹೋಗಬೇಕಾದರೆ 200 ರೂ.ಆಟೋದವರಿಗೆ ನೀಡುವ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದ ಅವರು ನಮ್ಮ ಬೇಡಿಕೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಜೂನ್ 6ರಂದು ಅಫಜಲಪುರ ಪಟ್ಟಣ ಬಂದ್ ಗೆ ಕರೆ ಕೊಟ್ಟು ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಜಕುಮಾರ ಬಡದಾಳ, ಆರ್.ಡಿ.ಪೂಜಾರಿ, ಅನೀಲ ಸಿಂಪಿ, ಚೇತನ ಕುಲಕರ್ಣಿ, ಶಂಕರ ತಳವಾರ, ಫಾರುಕ್ ಪಟೇಲ್, ಗುರುನಾಥ ಪಾಟೀಲ್, ಸಿರಾಜ ಚೌಧರಿ, ಸಂಪತಕುಮಾರ, ರಾಹುಲ್ ಅಂಬೂರೆ, ಆಪೀದಿ ಪಟೇಲ್, ಹಾಸೀಂ, ಎಂ.ಡಿ.ಅಬ್ದುಲ್, ದತ್ತು ಕುಲಕರ್ಣಿ, ನಿಂಗರಾಜ ಅತನೂರ, ರವಿ, ನಾಗೇಶ ಬೋಡೆ, ರಫೀಕ್ ಜಾಗೀರದಾರ, ಭೀಮರಾಯ ಶಹಾಪುರ, ಅಶೋಕ ಬಡದಾಳ, ಶಾಂತಬಾಯಿ ಗೌರ, ರವಿ, ಗಣೇಶ ಆನೂರ, ಶಿವಶರಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಸಾರ್ವಜನಿಕರು ಈ ಪ್ರತಿಭಟನೆಗೆ ಬೆಂಬಲಿಸಿದರು.