”INDIA ಕೂಟ ಅಧಿಕಾರಕ್ಕೆ ಬಂದ್ರೆ ಖಾತೆಗೆ 1 ಲಕ್ಷ ಹಣ”: ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ POST OFFICE ಮುಂದೆ ಸಾಲುಗಟ್ಟಿದ ಮಹಿಳೆಯರು

”INDIA ಕೂಟ ಅಧಿಕಾರಕ್ಕೆ ಬಂದ್ರೆ ಖಾತೆಗೆ 1 ಲಕ್ಷ ಹಣ”: ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ POST OFFICE ಮುಂದೆ ಸಾಲುಗಟ್ಟಿದ ಮಹಿಳೆಯರು

Share

ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ ನೇತೃತ್ವದ INDIA ಕೂಟ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಖಾತೆಗೆ 1 ಲಕ್ಷ ರೂ ಜಮೆ ಮಾಡಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ನಗರದ ವಿವಿಧ ಅಂಚೆ ಕಚೇರಿ ಮುಂದೆ ಜನ ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ.

ಹೌದು.. ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದಲ್ಲಿ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು.

ಈ ಘೋಷಣೆಯ ಬೆನ್ನಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ (post payments Bank digital account) ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ.

ರಾಹುಲ್‌ ಗಾಂಧಿ (Rahul Gandhi) ಘೋಷಣೆ ಪರಿಣಾಮ, ಪೋಸ್ಟ್‌ ಆಫೀಸ್‌ಗಳಲ್ಲಿ (Post Office) ಖಾತೆ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಇವರಲ್ಲಿ ಹೆಚ್ಚಾಗಿ ಮುಸ್ಲಿಂ ಮಹಿಳೆಯರೇ ಕಂಡು ಬರುತ್ತಿದ್ದಾರೆ. ಪ್ರತಿ ತಿಂಗಳು 8500 ರೂ. ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.ಜನರ ನಿಯಂತ್ರಣಕ್ಕೆ ಅಂಚೆ ಸಿಬ್ಬಂದಿ ಹರಸಾಹಸ

ಇನ್ನು ಕಳೆದ 15 ದಿನದಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಮಹಿಳೆಯರ ನಿಯಂತ್ರಣ ಮಾಡಲಾರದೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಕಚೇರಿ ಮುಂದೆ ಮುಗಿಬೀಳುತ್ತಿರುವ ಸುತ್ತಮುತ್ತಲಿನ ಶಿವಾಜಿನಗರ, ವಸಂತನಗರ ಮುಂತಾದೆಡೆಗಳ ಮಹಿಳೆಯರು, ಅವರ ಜೊತೆಗೆ ಬರುತ್ತಿರುವ ಪುರುಷರು ಅಂಚೆ ಕಚೇರಿ ಆವರಣವನ್ನು ಅಕ್ಷರಶಃ ಸಂತೆಯಾಗಿಸಿದ್ದಾರೆ.

ಟೋಕನ್ ವ್ಯವಸ್ಥೆ ಆರಂಭಿಸಿದ ಸಿಬ್ಬಂದಿ

ಮಹಿಳೆಯರ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿ ಟೋಕ‌ನ್ ವಿತರಿಸಲು ಆರಂಭಿಸಿದ್ದು, ಬೆಳಗ್ಗೆ 4 ಗಂಟೆಗೆ ಟೋಕನ್ ವಿತರಣೆ ಆರಂಭವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಮಹಿಳೆಯರು ಟೋಕನ್ ಪಡೆಯುತ್ತಿದ್ದಾರೆ.

ಹಣ ಬರುತ್ತೆ ಅಂದ್ರು.. ಅದಕ್ಕೆ ಬಂದ್ವಿ

ಇನ್ನು ಪೋಸ್ಟ್ ಆಫೀಸ್ ಖಾತೆ ತೆರೆದರೆ ಸರ್ಕಾರ ಹಣ ಹಾಕುತ್ತದೆ ಎಂದು ಪಕ್ಕದ ಮನೆಯವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ಹಣ ನೀಡುತ್ತಾರಂತೆ. ಮೋದಿ ಬಂದ್ರೆ 2 ಸಾವಿರ ನೀಡುತ್ತಾರಂತೆ. ಯಾರು ಬಂದ್ರೇನು ನಮಗೆ ಹಣ ಬರುತ್ತೆ ಅಂತ ಹೇಳಿದ್ರು. ಅದಕ್ಕೆ ಬಂದಿದ್ದೇವೆ. ಬೆಳಗ್ಗೆ 5 ಗಂಟೆಗೆ ಬಂದಿದ್ದೇವೆ. ಯಾವ ಅಧಿಕಾರಿಗಳೂ ಹೇಳಿಲ್ಲ, ನೆರೆಮನೆಯವರು, ಸ್ಥಳೀಯರು ಹೇಳಿದರು” ಎಂದು ಖಾತೆಗಾಗಿ ಕ್ಯೂ ನಿಂತ ಮಹಿಳೆಯೊಬ್ಬರು ತಿಳಿಸಿದ್ದಾರೆ.

ಜಿಪಿಒ ಸ್ಪಷ್ಟನೆ

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಡ್ ಪೋಸ್ಟ್ ಮಾಸ್ಟರ್ ಮಂಜೇಶ್ ಅವರು, ”ನಮ್ಮಲ್ಲಿ ಮೊದಲಿನಿಂದಲೂ IPPB ಖಾತೆ ಮಾಡುತ್ತಿದ್ದೇವೆ. ಆದರೆ ಕೆಲ ದಿನಗಳಿಂದ ಜನರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಕೌಂಟ್‌ಗೆ ಹಣ ಹಾಕ್ತಾರೆ ಅಂತ ಜನ ಬರುತ್ತಿದ್ದಾರೆ. ಹಣ ಬರುವ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ. ಆದರೆ ವದಂತಿ ಹರಡಿ ಜನರು ಜಾಸ್ತಿ ಜಾಸ್ತಿ ಬರ್ತಿದ್ದಾರೆ. ಈ ಖಾತೆಯಿಂದ ಬೇರೆ ಬೇರೆ ಪ್ರಾಧಿಕಾರಗಳಿಗೆ ಹಣ ಕಟ್ಟಬಹುದು.

200 ರೂ. ಮಾತ್ರ ಜಮಾ ಮಾಡಿಸಿ ಖಾತೆ ತೆರೆಯುತ್ತಿದ್ದೇವೆ. ಜನರು ಹೆಚ್ಚಾಗಿದ್ದರಿಂದ ಈಗ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದೇವೆ. ನಿತ್ಯ 1 ಸಾವಿರ ಅಕೌಂಟ್ ಮಾಡಿ ಕೊಡ್ತಿದ್ದೇವೆ. ಜನರಿಗೆ ಮಾಹಿತಿ ಕೊರತೆ ಇರೋದರಿಂದ ಮುಗಿಬೀಳ್ತಿದ್ದಾರೆ. ಇದಕ್ಕೆ ಯಾವುದೇ ಕೊನೆ ದಿನಾಂಕ ಇಲ್ಲ. ಯಾವ ಅಂಚೆ ಕಚೇರಿಯಲ್ಲಾದರೂ ಅಕೌಂಟ್ ಮಾಡಿಸಬಹುದು” ಎಂದು ಸ್ಪಷ್ಟನೆ ನೀಡಿದರು.


Share