ಭುವನೇಶ್ವರ್: ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಿಎಂ ನವೀನ್ ಪಟ್ನಾಯಕ್ ಅವರ ಆರೋಗ್ಯದಲ್ಲಿ ದಿಢೀರ್ ಕುಸಿತವಾಗಿರುವುದರ ಹಿಂದಿನ ಕಾರಣ ತಿಳಿಯುವುದಕ್ಕಾಗಿ ತನಿಖೆ ನಡೆಸಲು ಸಮಿತಿ ರಚನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ನವೀನ್ ಪಟ್ನಾಯಕ್ ಅವರ ಆರೋಗ್ಯ ಸ್ಥಿತಿಯಲ್ಲಿ ಕುಸಿತವಾಗಿರುವುದರ ಹಿಂದೆ ಪಿತೂರಿ ನಡೆದಿದೆ ಎಂಬ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಯ ಮೂಲಕ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.5 ದಶಕಗಳ ಬಳಿಕ ಕೇಂದ್ರದಲ್ಲಿ ಸತತ 3 ನೇ ಬಾರಿಗೆ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಮೋದಿ ಒಡಿಶಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮೋದಿ ಬರಿಪಾಡದಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು. ನವೀನ್ ಪಟ್ನಾಯಕ್ ಅವರ ಆರೋಗ್ಯದಲ್ಲಿ ದಿಢೀರ್ ಕುಸಿತವಾಗುವುದರ ಹಿಂದೆ ಪಿತೂರಿ ನಡೆದಿದೆಯೇ? ನವೀನ್ ಪಟ್ನಾಯಕ್ ಪರವಾಗಿ ಸರ್ಕಾರ ನಡೆಸುತ್ತಿರುವವರೇ ಅವರ ಆರೋಗ್ಯ ಸ್ಥಿತಿ ಹದಗೆಡಲು ಕಾರಣವೇ? ಎಂದು ಮೋದಿ ಪ್ರಶ್ನಿಸಿದ್ದಾರೆ.ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಪಟ್ನಾಯಕ್ ಆರೋಗ್ಯ ಹದಗೆಟ್ಟಿರುವುದರ ಹಿಂದಿರುವ ಕಾರಣ ತಿಳಿಯಲು ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ತಮಿಳುನಾಡಿನಿಂದ ಬಂದಿರುವ ಮತ್ತು ಪಟ್ನಾಯಕ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಬಿಜೆಡಿ ನಾಯಕ ವಿ ಕೆ ಪಾಂಡಿಯನ್ ಬಗ್ಗೆ ಮೋದಿ ಮಾತನಾಡಿದ್ದು “ಇಡೀ ಒಡಿಶಾ ಒಡಿಯಾ ಮುಖ್ಯಮಂತ್ರಿಯನ್ನು ಬಯಸುತ್ತದೆ” ಎಂದು ಹೇಳಿದ್ದಾರೆ.
ಒಡಿಶಾದಲ್ಲಿ 25 ವರ್ಷಗಳ ಬಿಜೆಡಿ ಆಡಳಿತಕ್ಕೆ ಪೂರ್ಣವಿರಾಮ ಹಾಕಲು ಒಡಿಶಾದ ಜನರು ನಿರ್ಧರಿಸಿದ್ದಾರೆ.