ಗಂಗಾವತಿ : ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಮತ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ತಾಲೂಕಿನ ಚಿಕ್ಕರಾಂಪುರ ಗ್ರಾಮಕ್ಕೆ ಮೇ-೦೩ ಶುಕ್ರವಾರದಂದು ಭೇಟಿ ನೀಡಿದ ಪರಿಸರ ಪ್ರೇಮಿ ಕುಮಾರಿ ಡಿ. ಸಿಂಧು ಗ್ರಾಮಸ್ಥರಿಗೆ ಮತದಾನ ಬಹಿಷ್ಕರಿಸದಂತೆ ಮನವೊಲಿಸಿದರು.
ಚುನಾವಣಾ ರಾಯಭಾರಿ ಡಾ|| ಶಿವುಕುಮಾರ ಮಾಲಿಪಾಟೀಲ್ ಅವರ ಸಲಹೆ ಮೇರೆಗೆ ಚಿಕ್ಕರಾಂಪುರ ಗ್ರಾಮಕ್ಕೆ ಭೇಟಿ ನೀಡಿದ ಕುಮಾರಿ ಡಿ. ಸಿಂಧು ಮನೆ, ಮನೆಗೆ ತೆರಳಿ ಮತ ಜಾಗೃತಿ ಮೂಡಿಸಿದರು. ಗ್ರಾಮಸ್ಥರು ಅಗತ್ಯ ಬೇಡಿಕೆಗಳಿಗಾಗಿ ಹೋರಾಟ ನಡೆಸಬೇಕೆ ಹೊರತು, ಹೀಗೆ ಮತ ಬಹಿಷ್ಕರಿಸುವುದು ಸರಿಯಲ್ಲ. ದೇಶದ ಭವಿಷ್ಯ ನಿರ್ಧರಿಸುವ ಅತ್ಯಂತ ಶ್ರೇಷ್ಠ ಜವಾಬ್ದಾರಿಯನ್ನು ನಮ್ಮ ಸಂವಿಧಾನ ಪ್ರಜೆಗಳಿಗೆ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಬಾರಿ ಹೆಚ್ಚಿನ ಮತದಾನ ಮಾಡುವ ಮೂಲಕ ಅತಿ ಹೆಚ್ಚು ಮತದಾನ ಮಾಡಿದ ಗ್ರಾಮ ಎಂAದು ಮಾದರಿ ಗ್ರಾಮವಾಗಬೇಕು ಎಂದು ಸಿಂಧು ಗ್ರಾಮಸ್ಥರಿಗೆ ತಿಳಿ ಹೇಳಿದರು.
ಸಿಂಧು ಅವರ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಈ ಬಾರಿ ನಾವು ಗ್ರಾಮಸ್ಥರೆಲ್ಲರೂ ತಪ್ಪದೇ ಮತ ಚಲಾಯಿಸುತ್ತೇವೆ. ಆದರೆ ನಮ್ಮ ಜೀವನಾಧಾರವಾಗಿರುವ ಜಮೀನು ಮತ್ತು ಮನೆಗಳನ್ನು ಸರಕಾರ ಕಸಿದುಕೊಳ್ಳುವ ಕೆಲಸ ಮಾಡಬಾರದು. ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಸಿ.ಸಿ. ರಸ್ತೆ ಹಾಗೂ ಆಧುನಿಕ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಐತಿಹಾಸಿಕ ಪ್ರಸಿದ್ಧ ಪಾರಂಪರಿಕ ತಾಣವನ್ನು ಯಥಾರೀತಿ ಕಾಪಾಡಬೇಕು ಎಂದು ತಿಳಿಸಿದರು.
ಈ ವೇಳೆ ಸ್ಥಳೀಯರಾದ ಗ್ರಾ.ಪಂ. ಸದಸ್ಯ ಗಾಳೆಮ್ಮ, ಲಕ್ಷ್ಮೀನಾರಾಯಣ, ಹನುಮಂತಪ್ಪ, ಅರ್ಜುನಪ್ಪ, ದೊರೆಸ್ವಾಮಿ, ಮಂಜುನಾಥ ಸೇರಿದಂತೆ ಇನ್ನಿತರರಿದ್ದರು.