LIC Health Insurance: ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಕ್ಕೆ LIC ಸಜ್ಜು!

LIC Health Insurance: ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಕ್ಕೆ LIC ಸಜ್ಜು!

Share

ಮುಂಬೈ: ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ(LIC)ವು ಆರೋಗ್ಯ ವಿಮಾ ವಲಯವನ್ನು ಪ್ರವೇಶಿಸುವುದಕ್ಕೆ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಕುರಿತ ಯೋಜನೆಗೆ ಚಾಲನೆ ನೀಡಲಿದೆ ಎಂದು ಹೇಳಲಾಗಿದೆ.

ಈ ಕುರಿತು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಮಾಹಿತಿ ನೀಡಿದ್ದು, ”ಆರೋಗ್ಯ ವಿಮಾ ವಲಯ ಪ್ರವೇಶಕ್ಕೆ ಆಂತರಿಕ ಮಟ್ಟದಲ್ಲಿನ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಎಂಜಿನಿಯರಿಂಗ್‌ ಹಾಗೂ ಅಗ್ನಿ ಅವಘಡಕ್ಕೆ ಸಂಬಂಧಿಸಿದ ವಿಮಾ ಸೌಲಭ್ಯ ಕಲ್ಪಿಸುವಲ್ಲಿ ನಿಗಮವು ಪರಿಣತಿ ಹೊಂದಿಲ್ಲ. ಆದರೆ, ಆರೋಗ್ಯ ವಿಮಾ ವಲಯದ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಮೂಲ ಸೇವೆಗೆ (ಜೀವ ವಿಮೆ) ನೇರವಾಗಿ ಸಂಬಂಧವಿಲ್ಲದ ಹೊಸ ಸೇವಾ ಕ್ಷೇತ್ರಕ್ಕೂ ವಹಿವಾಟು ವಿಸ್ತರಿಸಲಿದೆ” ಎಂದು ಹೇಳಿದ್ದಾರೆ.ವಿಮಾ ಕಾಯ್ದೆ 1938 ಮತ್ತು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಾವಳಿಗಳ ಅನ್ವಯ ಒಂದೇ ಕಂಪನಿಗೆ ಜೀವ ವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಸಂಯೋಜಿತ ಪರವಾನಗಿ ನೀಡುವಂತಿಲ್ಲ. ಹಾಗಾಗಿ, ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್‌ಐಸಿಗೆ ಈ ಪರವಾನಗಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಮಿತಿ ರಚಿಸಿದ್ದ ಕೇಂದ್ರ ಸರ್ಕಾರ!

ಅಂದಹಾಗೆ ಈ ಹಿಂದೆ ದೇಶದ ನಾಗರಿಕರಿಗೆ ವಿಮಾ ಸೌಲಭ್ಯ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಸಂಸದೀಯ ಸಮಿತಿ ಸಮಿತಿ ರಚಿಸಿತ್ತು.

ಈ ಸಮಿತಿಯು ದೇಶದೊಳಗೆ ವಿಮಾ ಸೌಲಭ್ಯ ಹೆಚ್ಚಿಸಲು ಒಂದು ಕಂಪನಿಗೆ ಜೀವ ವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮೆ ಸೌಲಭ್ಯ ನೀಡಲು ಸಂಯೋಜಿತ ಪರವಾನಗಿ ನೀಡಬಹುದು ಎಂದು ಶಿಫಾರಸು ಮಾಡಿದೆ. ಅಲ್ಲದೆ ವಿಮಾದಾರರಿಗೆ ಜೀವ ವಿಮೆ, ಆರೋಗ್ಯ ಮತ್ತು ಉಳಿತಾಯ ಒಳಗೊಂಡಂತೆ ಒಂದೇ ಪಾಲಿಸಿಯ ಆಯ್ಕೆ ಸೌಲಭ್ಯ ಕಲ್ಪಿಸಬೇಕಿದೆ.

ಇದು ವಿಮಾ ಮೌಲ್ಯವನ್ನು ಹೆಚ್ಚಿಸಲಿದೆ ಎಂದು ಸಂಸತ್‌ನಲ್ಲಿ ಮಂಡಿಸಿರುವ ಈ ವರದಿಯಲ್ಲಿ ಹೇಳಲಾಗಿದೆ.ಅಲ್ಲದೆ ವಿಮಾದಾರರು ಒಂದೇ ಕಂಪನಿಯಿಂದ ಕಡಿಮೆ ಪ್ರೀಮಿಯಂ ಪಾವತಿಸಿ ಸೌಲಭ್ಯ ಪಡೆಯುವುದರಿಂದ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಹೆಚ್ಚಲಿದೆ ಎಂದು ಹೇಳಿದೆ.


Share