ಶಿವಮೊಗ್ಗ: ಪಾಲಿಕೆಯಲ್ಲಿ ನಡೆದಿರುವ ಹಣ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳಿ ಎಂದು ಆತ್ಮಹತ್ಯೆಗೆ ಶರಮಾದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮ ನಿಯಮಿತದ (ಕೆಎಂವಿಎಸ್‌ಟಿಡಿಸಿ) ಅಧೀಕ್ಷಕ ಚಂದ್ರಶೇಖರನ್ ಅವರ ಕುಟುಂಬಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರನ್ ಅವರ ಪತ್ನಿ ಕವಿತಾ ಅವರು, ನನ್ನ ಪತಿ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಪಾಲಿಕೆಯಲ್ಲಿನ ಭ್ರಷ್ಟಾಚಾರದಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ಹೇಳಿದರು.
ಬಳಿಕ ಪತಿ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ತಳ್ಳಿಹಾಕಿದ ಅವರು, ಪ್ರಕರಣದ ಕುರಿತು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದೆ. ಸಿಐಡಿ ವಿಸ್ತೃತ ತನಿಖೆ ನಡೆಸಿ ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.ನನ್ನ ಇಬ್ಬರು ಮಕ್ಕಳನ್ನು ಸಾಕಿ,ಸಲಹಬೇಕಿದ್ದು, ಇದಕ್ಕಾಗಿ ಶಿವಮೊಗ್ಗದಲ್ಲಿರುವ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಜೀವನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ನನ್ನ ಪತಿಯಾಗಿರಲಿಲ್ಲ. ಡೆತ್ ನೋಟ್ ನಲ್ಲಿ ಸಾವಿಗೆ ಪಾಲಿಕೆಯಲ್ಲಿ ನಡೆಯುತ್ತಿರುವ ಅಕ್ರಮ ಕಾರಣ ಎಂದು ಹೇಳಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಪಾಲಿಕೆಯಲ್ಲಿ ಭ್ರಷ್ಟಾಚಾರ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನನ್ನ ಪತಿ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಮನೆಗೆ ಬಂದಿದ್ದರು. ನನ್ನ ಮಗ ಅವರನ್ನು ರೈಲ್ವೆ ನಿಲ್ದಾಣದಿಂದ ಮನೆಗೆ ಕರೆತಂದಿದ್ದ. ಮನೆ ಬಂದಾಗಿನಿಂದಲೂ ಮೌನವಾಗಿಯೇ ಇದ್ದರು. ಸರಿಯಾಗಿ ಊಟ ಮಾಡಲಿಲ್ಲ. ನಾನು ಬಲವಂತ ಮಾಡಿದ ಬಳಿಕ ಮಧ್ಯರಾತ್ರಿ ಮಲಗಲು ಹೋಗಿದ್ದರು. ಅಲ್ಲಿಯವರೆಗೂ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರವೂ ಸರಿಯಾಗಿ ಊಟ ಮಾಡಲಿಲ್ಲ. ದಿನದ ಬಹುಪಾಲು ಸಮಯವನ್ನು ಲ್ಯಾಪ್‌ಟಾಪ್‌ನಲ್ಲಿಯೇ ಕಳೆದಿದ್ದರು. ನಾನು ಇಡೀ ದಿನ ಅವರೊಂದಿಗೆ ಇದ್ದೆ ಎಂದು ಹೇಳಿದ್ದಾರೆ.
ಚಂದ್ರಶೇಖರನ್ ಅವರ ಪುತ್ರ ಶಿಶಿರ್ ಕೂಡ ತಮ್ಮ ತಂದೆ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.