ಛತ್ತೀಸಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು ಬಲಿ

ಛತ್ತೀಸಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು ಬಲಿ

Share

ಬಿಜಾಪುರ (ಛತ್ತೀಸ್‌ಗಢ): ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ. ಬಳಿಕ ಇಬ್ಬರು ನಕ್ಸಲರ ಮೃತದೇಹಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಈ ಘಟನೆಯೊಂದಿಗೆ, ರಾಜ್ಯದಲ್ಲಿ ಭದ್ರತಾ ಪಡೆಗಳೊಂದಿಗಿನ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈ ವರ್ಷ ಇದುವರೆಗೆ 118 ನಕ್ಸಲರು ಹತರಾಗಿದ್ದಾರೆ. ಮೇ 23 ರಂದು ನಾರಾಯಣಪುರ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಏಳು ನಕ್ಸಲರು ಸಾವಿಗೀಡಾಗಿದ್ದರು.ಮೇ 10 ರಂದು ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಹತ್ಯೆಯಾಗಿದ್ದರು.

ಏಪ್ರಿಲ್ 30 ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ನಕ್ಸಲರು ಬಲಿಯಾಗಿದ್ದರು. ಅದಕ್ಕೂ ಮೊದಲು, ಏಪ್ರಿಲ್ 16 ರಂದು ರಾಜ್ಯದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲನ್ನು ಹೊಡೆದುರುಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


Share