ಬೆಳ್ಳೂರಿನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಪ್ರಕರಣ; 3 ಪ್ರತ್ಯೇಕ ದೂರು ದಾಖಲು

ಬೆಳ್ಳೂರಿನಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಪ್ರಕರಣ; 3 ಪ್ರತ್ಯೇಕ ದೂರು ದಾಖಲು

Share

ಮಂಡ್ಯ: ಮಂಡ್ಯಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಹಿಂದೂ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಘಟನೆ ಸಂಬಂಧ ಮೂರು ಪ್ರತ್ಯೇಕ ದೂರು ದಾಖಲಾಗಿದೆ.

ಹಲ್ಲೆಗೊಳಗಾದ ಅಭಿಲಾಷ್ ತಂದೆ ರಾಮು, ಅಭಿಲಾಷ್​ ಅತ್ತೆ ರಶ್ಮಿ ಹಾಗೂ ಮಂಜುಳಾ ಎಂಬುವವರು ಹಿಂದೂ ಸಂಘಟನೆ ಮುಖಂಡರೊಂದಿಗೆ ಠಾಣೆಗೆ ತೆರಳಿ ಮಂಡ್ಯ ಎಸ್‌ಪಿ ಯತೀಶ್ ಸಮ್ಮುಖದಲ್ಲಿ ದೂರು ದಾಖಲು ಮಾಡಿದ್ದಾರೆ.

ಘಟನೆ ಬಳಿಕ ದೂರು ಸ್ವೀಕರಿಸದ ಪೊಲೀಸರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಅಭಿಲಾಷ್ ಮೇಲೆ ಹಲ್ಲೆ, ರಶ್ಮಿ ಮನೆಗೆ ನುಗ್ಗಿ ದಾಂಧಲೆ ಹಾಗೂ ಮಂಜುಳಾಗೆ ರಸ್ತೆಯಲ್ಲಿ ಬೆದರಿಕೆ ಹಾಕಿದ ಬಗ್ಗೆಯೂ ಪ್ರತ್ಯೇಕ ದೂರು ನೀಡಿದ್ದು, ಮೊಹ್ಮದ್ ಹುಜೈಫ್, ಇಮ್ರಾನ್, ಸಮೀರ್ ಸೂಫಿಯಾನ್ ಮತ್ತು ಇರ್ಫಾನ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.

ಆರೋಪಿಗಳಾದ ಮಹಮ್ಮದ್ ಹುಜೈಫ್, ಇಮ್ರಾನ್, ಸುಫಿಯಾನ್ ಮತ್ತು ಇತರರನ್ನು ಕೂಡಲೇ ಬಂಧಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಡಿಐಜಿ (ದಕ್ಷಿಣ ವ್ಯಾಪ್ತಿ) ಅಮಿತ್ ಸಿಂಗ್ ಅವರು ಎಸ್ಪಿ ಯತೀಶ್ ಅವರೊಂದಿಗೆ ಮಂಗಳವಾರ ಬೆಳ್ಳೂರು ಠಾಣೆಗೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಬೆಳ್ಳೂರು ಪೊಲೀಸ್ ಠಾಣೆ ಸೇರಿದಂತೆ ತಾಲೂಕಿನ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಅಭಿಲಾಷ್ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಯತೀಶ್ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಶೀಘ್ರ ಕಾನೂನು ಕ್ರಮವನ್ನು ಖಚಿತಪಡಿಸುತ್ತೇವೆ. ಅಲ್ಲದೆ, ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರನ್ನು ವಿಚಾರಣೆಗೊಳಪಡಿಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ .ಯತೀಶ್ ಅವರು ಅಭಿಲಾಷ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದರು.

ವೇಗವಾಗಿ ಕಾರು ಚಲಾಯಿಸಬೇಡಿ ಎಂದು ಹೇಳಿದ್ದರಿಂದ ಆಕ್ರೋಶಗೊಂಡ ಮುಸ್ಲಿಂ ಯುವಕರ ಗುಂಪೊಂದು ಅಭಿಲಾಷ್​ ಅವರ ಮೇಲೆ ದಾಳಿ ನಡೆಸಿತ್ತು. ಶುಕ್ರವಾರ ರಾತ್ರಿ ಬೆಳ್ಳೂರಿನಲ್ಲಿ ನಡೆದ ಗಂಗಾಪರಮೇಶ್ವರಿ ಉತ್ಸವದಲ್ಲಿ ಪಾಲ್ಗೊಂಡು ಅಭಿಲಾಷ್, ಅವರ ಸಹೋದರ ಹೇಮಂತ್ ಮತ್ತು ಮಾವ ನಾಗೇಶ್ ಅವರು ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

ಕಾರಿನಲ್ಲಿ ಬಂದಿರುವ ನಾಲ್ವರು ಯುವಕರು ಅಭಿಲಾಷ್ ಅವರ ಕಾರನ್ನು ಅಡ್ಡಗಟ್ಟಿ ನಿಂದಿಸಿದ್ದಾರೆ. ಬಳಿಕ ಮಧ್ಯರಾತ್ರಿ 1.30 ರ ಸುಮಾರಿಗೆ 40 ಜನರೊಂದಿಗೆ ಮತ್ತೆ ಬಂದಿರುವ ಕಿಡಿಗೇಡಿಗಳು, ಅಭಿಲಾಷ್ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿ, ಬೆದರಿಕೆ ಹಾಕಿದೆ. ಈ ಸಂಬಂಧ ಅಭಿಲಾಷ್ ಕುಟುಂಬಸ್ಥರು ಬೆಳ್ಳೂರು ಠಾಣೆಗೆ ಭೇಟಿ ನೀಡಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಮತ್ತೆ ಸೋಮವಾರ ಸಂಜೆ ಯುವಕರ ಗುಂಪು ಅಭಿಲಾಷ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ತಡೆಯಲು ಬಂದ ಕುಟುಂಬದ ಸದಸ್ಯರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇನ್ನೊಂದು ಗುಂಪು ಅಭಿಲಾಷ್‌ನ ಮಾವ ನಾಗೇಶ್ ಮನೆಗೆ ಹೋಗಿ ಲೂಟಿ ಮಾಡಲು ಯತ್ನಿಸಿತ್ತು ಎನ್ನಲಾಗಿದೆ. ಮನೆಯಲ್ಲಿ ಒಬ್ಬರೇ ಇದ್ದ ನಾಗೇಶ್ ಅವರ ಪತ್ನಿ ರಶ್ಮಿ ಅವರು ಬಾಗಿಲಿಗೆ ಬೀಗ ಹಾಕಿದ್ದು, ಅಕ್ಕಪಕ್ಕದವರು ಯುವಕರನ್ನು ಹೆದರಿಸಿ ಓಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Share