ಕುಮಟಾ: ದೊಡ್ಡದಾದ ಕೋಟೆ, ಅದರ ಹೆಬ್ಬಾಗಿಲಲ್ಲಿ ಶಿಸ್ತಾಗಿ ನಿಂತು ಸದಾ ಕಾವಲು ಕಾಯುವ ಬಿಳಿ ಬಣ್ಣದ ಪಟ್ಟ ಸಿಪಾಯಿಗಳು. ಈ ರಕ್ಷಣಾ ಕಾರ್ಯದ ಉಸ್ತುವಾರಿಯನ್ನು ಹೊತ್ತಿರುವ ಸಿಪಾಯಿಗಳ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಇಡಿ ಕೋಟೆಯೇ ಕುಸಿಯುತ್ತದೆ. ಈ ಸಿಪಾಯಿಗಳೆಂದರೆ ಹಲ್ಲುಗಳು, ಹಲ್ಲಿನ ಕಾಳಜಿ ಎಲ್ಲರ ಆದ್ಯತೆಯಾಗಬೇಕು’ ಎಂದು ದಂತವೈದ್ಯ ಡಾ. ಹರ್ಷ ಹೆಗಡೆ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಕ್ಲಬ್ ಮತ್ತು ಕಮಲಾ ಬಾಳಿಗಾ ಕಾಲೇಜಿನ ಎನ್.ಎಸ್.ಎಸ್. ಘಟಕ ಸೇರಿದಂತೆ ವಿವಿಧ ಆರೋಗ್ಯ ಸಂಬಂಧೀ ಘಟಕಗಳಡಿ ಶಾರದಾ ನಿಲಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಹಲ್ಲಿನ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಮಕ್ಕಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಹಲ್ಲಿನ ಆರೋಗ್ಯ ನಿರ್ವಹಣೆಯ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನವಾಗಿ ದಂತ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಸಂಘಟಿತ ಪ್ರಯತ್ನಗಳ ಮೂಲಕ ರೋಟರಿ ಸಂಸ್ಥೆ ಹಲ್ಲಿನ ಆರೋಗ್ಯವನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತಿರುವುದಾಗಿ ರೋಟರಿ ಅಧ್ಯಕ್ಷ ಎನ್. ಆರ್. ಗಜು ತಿಳಿಸಿದರು. ತಾನು ಬಾಲ್ಯದಿಂದಲೂ ಹಲ್ಲಿನ ಆರೋಗ್ಯದ ಬಗ್ಗೆ ಅತೀವ ಕಾಳಜಿವಹಿಸಿಕೊಂಡು ಬಂದಿರುವುದರಿಂದ
ನನ್ನ ಹಲ್ಲುಗಳು ಸದೃಢವಾಗಿವೆ. ಮಕ್ಕಳಾದ ನೀವೂ ಸಹ ಕ್ರಮಬದ್ಧವಾಗಿ ಹಲ್ಲನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವುದರಿಂದ ಆರೋಗ್ಯದಿಂದಿರಬಹುದು ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಕಮಲಾ ಬಾಳಿಗಾ ಕಾಲೇಜಿನ ಪ್ರಾಚಾರ್ಯ ಡಾ.ಪ್ರೀತಿ ಭಂಡಾರಕರ ಕಿವಿಮಾತು ಹೇಳಿದರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ವೈದ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜಿನ ಎನ್. ಎಸ್.ಎಸ್. ಘಟಕದ ಸಂಚಾಲಕರಾದ ಪ್ರೊ, ರೇಖಾ ಯಲಿಗಾರ ಸ್ವಾಗತಿಸಿದರು. ಶಾರದಾ ನಿಲಯ ಶಾಲೆಯ ಮುಖ್ಯ ಶಿಕ್ಷಕಿ ಮಹಾದೇವಿ ಗೌಡ ವಂದಿಸಿದರು. ಶಾಲಾ ಸಹಶಿಕ್ಷಕರು, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಸಹಕರಿಸಿದರು. 35 ವಿದ್ಯಾರ್ಥಿಗಳಿಗೆ ದಂತ ತಪಾಸಣೆಗೈದು ಸೂಕ್ತ ಸಲಹೆ ನೀಡಲಾಯಿತು.