ಬೆಂಗಳೂರು: 2,602 ಎಕರೆ ಒತ್ತುವರಿ ಭೂಮಿಯನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ

ಬೆಂಗಳೂರು: 2,602 ಎಕರೆ ಒತ್ತುವರಿ ಭೂಮಿಯನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ

Share

ಬೆಂಗಳೂರು: ಅರಣ್ಯ ಇಲಾಖೆಯ ಆದಾಯ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, 2019-20ರಲ್ಲಿ 263.41 ಕೋಟಿ ರೂ.ಗಳಷ್ಟಿದ್ದ ಆದಾಯ 2023-24ರಲ್ಲಿ 417.84 ಕೋಟಿ ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ ಅತಿಕ್ರಮಣ ಮಾಡಿದ್ದ 2602.30 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಮಂಗಳವಾರ ಹೇಳಿದ್ದಾರೆ.2023-24ರಲ್ಲಿ ಮೀಸಲು ಅರಣ್ಯ ಪ್ರದೇಶವು 3395.73 ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ ಮತ್ತು ಸಂರಕ್ಷಿತ ಪ್ರದೇಶವು 184.52 ರಷ್ಟು ಹೆಚ್ಚಾಗಿದೆ. 1500 ಕೋಟಿ ರೂ. ಮೌಲ್ಯದ ಒತ್ತುವರಿ ಮಾಡಿಕೊಂಡಿದ್ದ 2602.30 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಕೋಲಾರ ವಿಭಾಗದಲ್ಲಿ ಒತ್ತುವರಿಯಾಗಿದ್ದ 1392.41 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಡಿಕೇರಿಯಲ್ಲಿ 5.50 ಎಕರೆ ಹಾಗೂ ಬೆಂಗಳೂರಿನ ಕೊತ್ತನೂರು ಅರಣ್ಯ ವಿಭಾಗದಲ್ಲಿ 17 ಎಕರೆ ಜಾಗವನ್ನು ತೆರವುಗೊಳಿಸಲಾಗಿದೆ. ಕೊಡಗು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ಬ್ರಿಟಿಷರು ಕೈಗಾರಿಕೆಗಳು ಮತ್ತು ಎಸ್ಟೇಟ್‌ಗಳಿಗೆ ಗುತ್ತಿಗೆ ನೀಡಿದ್ದ ಸುಮಾರು 7,500 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ ಅವಧಿ ಮುಗಿದ ತಕ್ಷಣ ವಶಪಡಿಸಿಕೊಳ್ಳಲಾಗುವುದು. ಈ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದ ಕಂಪನಿಗಳು ಕೋಟ್ಯಂತರ ರೂ.ಗಳಿಸಿವೆ ಎಂದು ಖಂಡ್ರೆ ಹೇಳಿದರು.ಈ ಆರ್ಥಿಕ ವರ್ಷಕ್ಕೆ ಸಸಿ ನೆಡುವ ಅಭಿಯಾನ ಕೈಗೊಳ್ಳಲು 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಾದ್ಯಂತ 5.40 ಕೋಟಿ ಸಸಿಗಳನ್ನು ನೆಡಲಾಗಿದ್ದು, ಅವುಗಳಲ್ಲಿ ಎಷ್ಟು ಬದುಕುಳಿದಿವೆ ಎಂಬುದನ್ನು ತಿಳಿಯಲು ಮೂರು ತಿಂಗಳ ಕಾಲ ಆಡಿಟ್ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮಾತನಾಡಿದ ಖಂಡ್ರೆ, ಸುಮಾರು 6,000 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 310 ವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 540 ಗಾರ್ಡ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 10 ಅರಣ್ಯ ವಲಯಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರವೇ ಲಿಖಿತ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.


Share