ಬೆಂಗಳೂರು: ಬೇಸಿಗೆ ರಜೆ ಮುಗಿದಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಶುರುವಾಗಿವೆ. ಬುಧವಾರದಿಂದ 2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ.
ಕಳೆದ 2 ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಓಪನ್ ಆಗಿವೆ. ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಸರ್ಕಾರಿ ಶಾಲೆಗಳು ಬುಧವಾರದಿಂದ ಅಧಿಕೃತವಾಗಿ ಪುನರಾರಂಭಗೊಂಡಿದೆ.
ಮಜಾ ಮುಗಿಸಿಕೊಂಡು ವಾಪಸ್ ಆಗಿರುವ ಚಿಣ್ಣರಿಗೆ, ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಳ್ಳುತ್ತಿದ್ದಾರೆ.
ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದ್ದಾರೆ. ತಳಿರು ತೋರಣ, ರಂಗೋಲೆ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂವು, ಚಾಕೊಲೇಟ್ ಸೇರಿದಂತೆ ಯಾವುದಾದರೂ ಸಿಹಿ ನೀಡಿ ಸ್ವಾಗತಿಸುವಂತೆ ಸಲಹೆ ನೀಡಲಾಗಿದೆ.
ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಮಟ್ಟಕ್ಕೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ಕೂಡ ಶೇ.75ರಿಂದ 80ರಷ್ಟು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುವುದು. ಬಿಇಒ, ಡಿಡಿಪಿಐಗಳು ಶಾಲೆಗಳಿಗೆ ಅವುಗಳನ್ನು ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಕ್ರಮ ವಹಿಸಬೇಕೆಂದು ಕಳಪೆ ಗುಣಮಟ್ಟದ ವಸ್ತುಗಳಿಗೆ ಸಂಬಂಧಿಸಿದಂತೆ ಅಥವಾ ಶಾಲೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದಿದ್ದರೆ ವರದಿ ಮಾಡಬೇಕು ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ತಜ್ಞರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಶಾಲೆಗಳು ಮತ್ತು BEO ಗಳು ಪ್ರತೀಬಾರಿ ಅನುಸರಿಸುವ ಕ್ರಮಗಳ ಹೊರತಾಗಿ ಹೆಚ್ಚಿನದ್ದನ್ನು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹರಾವ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಬೇಕು. ರಾಜ್ಯದಲ್ಲಿ ತಾಪಮಾನ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಮಕ್ಕಳು ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದೆ, ತಮ್ಮ ಗೆಳೆಯರೊಂದಿಗೆ ಆಟವಾಡಲು ಸಾದ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅವರ ದಿನಚರಿಯನ್ನು ಬದಲಾಯಿಸಲು ಸಹಾಯ ಮಾಡುವ ವಾತಾವರಣವನ್ನು ಸೃಷ್ಟಿಸಬೇಕೆಂದು ಹೇಳಿದ್ದಾರೆ.
ಶಾಲೆ ಆರಂಂಭವಾದ ಮೊದಲ ಮೂರು ದಿನ ಅವರೊಂದಿಗೆ ಮಾತುಕತೆ, ಚರ್ಚೆ ನಡೆಸಬೇಕು. ಇದರಿಂದ ಅವರ ನೈತಿಕತೆ ಹೆಚ್ಚಾಗುತ್ತದೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.