ಹೈದರಾಬಾದ್: ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಸರ್ಕಾರ ರಾಜ್ಯಾದ್ಯಂತ ಗುಟ್ಕಾ, ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ರಾಜ್ಯದಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ತೆಲಂಗಾಣ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಮೇ 24 ರಂದು ಸಾರ್ವಜನಿಕ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ಆದೇಶ ಹೊರಡಿಸಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ನಿಷೇಧ ಮತ್ತು ಮಾರಾಟದ ನಿರ್ಬಂಧ) ನಿಯಮಾವಳಿ 2011ರ ನಿಯಮಾವಳಿ 2.3.4ರ ಜೊತೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಸೆಕ್ಷನ್ 30ರ ಉಪ-ವಿಭಾಗ (2) ರ ಷರತ್ತು (ಎ) ಅಡಿಯಲ್ಲಿ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಸ್ಯಾಚೆಟ್ಗಳು, ಪೌಚ್ಗಳು ಅಥವಾ ಪ್ಯಾಕೇಜುಗಳಲ್ಲಿ ಪ್ಯಾಕ್ ಮಾಡಲಾದ ಗುಟ್ಕಾ ಮತ್ತು ಪಾನ್ ಮಸಾಲಾವನ್ನು 2024 ರ ಮೇ 24 ರಿಂದ ಜಾರಿಗೆ ಬರುವಂತೆ ಇಡೀ ತೆಲಂಗಾಣ ರಾಜ್ಯದಲ್ಲಿ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.
ಸರ್ಕಾರದ ಈ ಆದೇಶಕ್ಕೆ ಪಾನ್ ಶಾಪ್ ಮಾಲೀಕರಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಒಪ್ಪಿಗೆ ಸೂಚಿಸಿದ್ದರೆ ಮತ್ತೆ ಕೆಲ ಮಾಲೀಕರು ಆದೇಶ ಪಾಲನೆಗೆ ಸಹಕಾರ ನೀಡುತ್ತಿಲ್ಲ ಎನ್ನಲಾಗಿದೆ.
ಗುಟ್ಕಾ ಮಾರಾಟಗಾರರ ಜೀವನೋಪಾಯಕ್ಕೆ ಧಕ್ಕೆ!
ಇದೇ ವಿಚಾರವಾಗಿ ಮಾತನಾಡಿರುವ ತೆಲಂಗಾಣ ಪಾನ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಮೊಹಮ್ಮದ್ ಸಲಾವುದ್ದೀನ್ ದಖ್ನಿ, ”ತೆಲಂಗಾಣದಲ್ಲಿ ಸುಮಾರು 1.5 ಲಕ್ಷ ಪಾನ್ ಶಾಪ್‌ಗಳಿವೆ. ನಾವು ಗುಟ್ಕಾ ನಿಷೇಧವನ್ನು ಬೆಂಬಲಿಸುತ್ತೇವೆ ಮತ್ತು ಅನೇಕ ಅಂಗಡಿಗಳು ಈಗಾಗಲೇ ಅದರ ಮಾರಾಟವನ್ನು ನಿಲ್ಲಿಸಿವೆ.
ಆದರೆ, ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಗುಟ್ಕಾ ಮಾರಾಟ ಅವಲಂಬಿಸಿರುವುದರಿಂದ ಜಗಿಯುವ ತಂಬಾಕು ಮತ್ತು ಜರ್ದಾಕ್ಕೆ ನಿಷೇಧದಿಂದ ವಿನಾಯಿತಿ ನೀಡುವಂತೆ ನಾವು ಅಧಿಕಾರಿಗಳನ್ನು ವಿನಂತಿಸುತ್ತೇವೆ. ನಮ್ಮ ಸಂಘ ಗುಟ್ಕಾ ನಿಷೇಧ ಸಂಬಂಧ ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಮನವಿ ಸಲ್ಲಿಸಿತ್ತು.
ರಾಜ್ಯಾದ್ಯಂತ ಅನೇಕ ಪಾನ್ ಶಾಪ್‌ಗಳಲ್ಲಿ ಗುಟ್ಕಾ ಮಾರಾಟ ಮಾಡುವುದಿಲ್ಲ ಎಂಬ ಪೋಸ್ಟರ್‌ಗಳನ್ನು ಸಹ ಪ್ರದರ್ಶಿಸಲಾಗಿದೆ ಎಂದು ಸಲಾವುದ್ದೀನ್ ಹೇಳಿದ್ದಾರೆ.ಅಂದಹಾಗೆ 2014 ರಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಯಾದಾಗಿನಿಂದ ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧಿಸಲಾಗಿದೆ. ಈ ನಿಷೇಧವನ್ನು ತೆಲಂಗಾಣ ಹೈಕೋರ್ಟ್ 2021 ರ ನವೆಂಬರ್ನಲ್ಲಿ ಎತ್ತಿಹಿಡಿದಿತ್ತು. ಈ ನಿಷೇಧವನ್ನು ಗುಟ್ಕಾ ತಯಾರಕರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ನಿಷೇಧ ಅಧಿಸೂಚನೆಗೆ ಮಾರ್ಚ್ 2022 ರಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಸೆಪ್ಟೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್ ತಡೆಯಾಜ್ಞೆ ಜಾರಿಯಲ್ಲಿರುವವರೆಗೆ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ದಂಡನಾತ್ಮಕ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಅಧಿಕಾರಿಗಳನ್ನು ನಿರ್ಬಂಧಿಸಿತು. ಗುಟ್ಕಾವನ್ನು ನಿಷೇಧಿಸಿ ರಾಜ್ಯ 2023 ರ ಜನವರಿಯಲ್ಲಿ ಮತ್ತೆ ಅಧಿಸೂಚನೆ ಹೊರಡಿಸಿತು. ಆದರೆ ಇದನ್ನು ಕೂಡ ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.