2020ರ ಗಲಭೆ ಪ್ರಕರಣ: ಉಮರ್ ಖಾಲಿದ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

2020ರ ಗಲಭೆ ಪ್ರಕರಣ: ಉಮರ್ ಖಾಲಿದ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

Share

ನವದೆಹಲಿ: 2020ರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ಗಲಭೆ ನಡೆದಿತ್ತು. ಆ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕಾರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯ್ ಅವರು ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಪ್ರಕರಣದಲ್ಲಿ ಆರೋಪಿಯಾಗಿರುವ ಖಾಲಿದ್ ಅವರು ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ನಿಯಮಿತವಾಗಿ ಕೋರಿದ್ದರು. ಇದು ಅವರ ಎರಡನೇ ಜಾಮೀನು ಅರ್ಜಿಯಾಗಿತ್ತು.ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಉಮರ್ ಖಾಲಿದ್ ಅವರು ತನ್ನ ಜಾಮೀನು ಅರ್ಜಿಯನ್ನು 2024ರ ಫೆಬ್ರವರಿ 14 ರಂದು ಹಿಂತೆಗೆದುಕೊಂಡಿದ್ದಾರೆ. ಇದಾದ ನಂತರ ಖಾಲಿದ್ ಅವರು ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದರು.


Share