ಬೆಂಗಳೂರು: ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ‘ಕಾಂಗ್ರೆಸ್ ಕುಟುಂಬ’ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ಉಪಕ್ರಮದ ಭಾಗವಾಗಿ, ಪ್ರತಿ ಬೂತ್‌ನಲ್ಲಿ 50 ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ದಾಖಲಿಸಲಾಗುವುದು ಮತ್ತು ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಈ 50 ಬೂತ್ ಕಾರ್ಯಕರ್ತರನ್ನು ಒಳಗೊಂಡಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಕಾಂಗ್ರೆಸ್ ಹೊಸ ಉಪಕ್ರಮ ಆರಂಭಿಸುತ್ತಿದೆ. ಎಲ್ಲಾ ಪಕ್ಷದ ಮುಖಂಡರು ಪ್ರತಿ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಕಟ್ಟಿ ಬೆಳೆಸಬೇಕು, ಜೂನ್ 1 ರಂದು ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ, ಈ ಹೊಸ ಉಪಕ್ರಮಕ್ಕೆ ಪಕ್ಷದ ಎಲ್ಲಾ ಮುಖಂಡರು ಸಿದ್ಧರಾಗಿರಬೇಕು ಎಂದು ಹೇಳಿದರು.ಇನ್ನು ಮುಂದೆ ಪ್ರತಿ ವಾರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಸಿಎಂ ಮತ್ತು ನಾನು ನಿರ್ಧರಿಸಿದ್ದೇವೆ. ಈ ಕುರಿತು ಈಗಾಗಲೇ ಸಿಎಂ ಜತೆ ಚರ್ಚಿಸಿದ್ದು, ಶೀಘ್ರವೇ ಈ ಸಭೆಗಳನ್ನು ಆಯೋಜಿಸುತ್ತೇವೆ. ಈ ಸಭೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಾಥಮಿಕ ಸದಸ್ಯರಿಗೆ ಮಾತ್ರ ಎಂದು ಡಿಸಿಎಂ ಹೇಳಿದರು.
ಈ ಕಾಂಗ್ರೆಸ್ ಸರ್ಕಾರ ಕೇವಲ 4 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ, ಈಗಿನಿಂದಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು. ನಮ್ಮ ಪಕ್ಷ ಎಲ್ಲ ಆರು ಸ್ಥಾನಗಳನ್ನು ಗೆಲ್ಲಬೇಕು. ಇದರಿಂದ ನಮಗೆ ಕೌನ್ಸಿಲ್‌ನಲ್ಲಿ ಬಹುಮತ ಸಿಗುತ್ತದೆ, ಮಸೂದೆಗಳನ್ನು ಅಂಗೀಕರಿಸಲು ನಮಗೆ ಸುಲಭವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಿದ್ದಾರೆ. ದೇಶದ ಜನರು ಇಂಡಿಯಾ ಬ್ಲಾಕ್ ನ್ನು ಆಶೀರ್ವದಿಸಿದ್ದಾರೆ. ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಇಂಡಿಯಾ ಬ್ಲಾಕ್ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು