ಬೆಂಗಳೂರು: ಖಾಸಗಿ ಸೆಕ್ಯುರಿಟಿ ಮತ್ತು ಡಿಟೆಕ್ಟಿವ್ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಶಿಕ್ಷಕರನ್ನು ನೇಮಿಸಿಕೊಳ್ಳುವ ಬಿಬಿಎಂಪಿ ನಿರ್ಧಾರವು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2024-25ನೇ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆಯಿಂದ ಬಿಬಿಎಂಪಿ ಶಾಲೆ ಕಾಲೇಜುಗಳಿಗೆ ಶಿಕ್ಷಕರನ್ನು ಒದಗಿಸಲಾಗುವುದು. ಮೂಲ ಸೌಕರ್ಯಗಳನ್ನು ಬಿಬಿಎಂಪಿ ಒದಗಿಸಲಿದೆ ಎಂದು ಹೇಳಿದ್ದರು.
ಈ ಪ್ರಕ್ರಿಯೆಗೆ ಸುಮಾರು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಆದರೂ, ಇದಕ್ಕೆ ಮಣಿಯದ ಸರ್ಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು, ‘ಅನರ್ಹ ಶಿಕ್ಷಕರಿದ್ದಾರೆ. ಅವರೆಲ್ಲ ಬೇಡ. ಶಿಕ್ಷಣ ಇಲಾಖೆಯಿಂದಲೇ ಶಿಕ್ಷಕರು ಬರುತ್ತಾರೆ. ಈಗಿರುವವರು ಅರ್ಹತೆ ಇದ್ದರೆ ಎಸ್‌ಡಿಎಂಸಿ ಮೂಲಕ ನೇಮಕವಾಗಬಹುದು. ಅವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದ್ದರು.
ಆದರೆ, ಇದ್ಯಾವ ಪ್ರಕ್ರಿಯೆಯೂ ಆಗದೆ, ಹಿಂದಿನ ಏಜೆನ್ಸಿಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ಒದಗಿಸಲು ಬಿಬಿಎಂಪಿ ಆದೇಶ ಹೊರಡಿಸಿದೆ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಗುತ್ತಿಗೆ ಪಡೆದಿದ್ದ ಏಜೆನ್ಸಿಗಳಿಗೇ 2024-25ನೇ ಶೈಕ್ಷಣಿಕ ವರ್ಷಕ್ಕೂ ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಆದೇಶ ನೀಡಲಾಗಿದೆ. ಹೊಸ ಟೆಂಡರ್ ಪ್ರಕ್ರಿಯೆ ನಡೆಸದೆ ಅಕ್ರಮವಾಗಿ ಹಿಂದಿನ ವರ್ಷದ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದೆ.ದಕ್ಷಿಣ ವಲಯ ಮತ್ತು ಆರ್.ಆರ್. ನಗರ ವಲಯಕ್ಕೆ ‘ಅಪ್ಪು ಡಿಟೆಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್’, ಪೂರ್ವ ವಲಯಕ್ಕೆ ‘ಡಿಟೆಕ್ಟ್‌ವೆಲ್ ಆ್ಯಂಡ್ ಸೆಕ್ಯೂರಿಟಿ ಸರ್ವಿಸ್ ಪ್ರೈ ಲಿಮಿಟೆಡ್’ ಹಾಗೂ ಪಶ್ಚಿಮ ವಲಯಕ್ಕೆ ‘ಶಾರ್ಪ್ ವಾಚ್ ಇನ್‌ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟಿಡ್’ಗಳು ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಬಿಬಿಎಂಪಿ ಆಯಾ ವಲಯದ ಕಾರ್ಯಪಾಲಕ ಎಂಜಿನಿಯರ್ ಕಾರ್ಯಾದೇಶ ನೀಡಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಗುತ್ತಿಗೆ ಶಿಕ್ಷಕರ ಸಂಘದ ಉಪಾಧ್ಯಕ್ಷ ವೀರೇಶ್ ನಾಯಕ್, ಏಜೆನ್ಸಿಗಳ ಅಡಿಯಲ್ಲಿ ಶಿಕ್ಷಕರ ವೇತನದಲ್ಲಿ 1,000-3,000 ರೂ.ವರೆಗೆ ಕಡಿತಗೊಳಿಸಲಾಗುವುದು. ಬಿಬಿಎಂಪಿ ನಿರ್ಧಾರದಿಂದ ಗುತ್ತಿಗೆ ಆಧಾರದ ಮೇಲೆ ಬರುವ 700 ಶಿಕ್ಷಕರಿಗೆ ತೊಂದರೆಯಾಗಲಿದೆ. ಈಗಾಗಲೇ ಏಜೆನ್ಸಿಗಳು ಶಿಕ್ಷಕರ ದಾಖಲೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿವೆ. ಇದೀಗ ನಾವು ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಪುಟ್ಟಣ್ಣ ಅವರನ್ನು ಸಂಪರ್ಕಿಸಿದ್ದೇವೆ, ಅವರು ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಎಂಎಲ್‌ಸಿ ಪುಟ್ಟಣ್ಣ ಅವರು ಪ್ರತಿಕ್ರಿಯಿಸಿ, ಬಿಬಿಎಂಪಿ ಅಧಿಕಾರಿಗಳ ನಿರ್ಧಾರ ಅಸೂಕ್ಷ್ಮವಾಗಿದೆ. ಚುನಾವಣಾ ನೀತಿ ಸಂಹಿತೆ ಹಿಂಪಡೆದ ನಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮಸ್ಯೆ ಬಗೆಹರಿಯದಿದ್ದರೆ ಜೂನ್ 6ರಂದು ಬಿಬಿಎಂಪಿಗೆ ನಿಯೋಗ ಕರೆದೊಯ್ದು ಪ್ರತಿಭಟನೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈಗಾಗಲೇ ತಿಳಿಸಿದ್ದು, ಸಮಸ್ಯೆ ಪರಿಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಪುಟ್ಟಣ್ಣ ಹೇಳಿದ್ದಾರೆ.
ಮಾಜಿ ಶಿಕ್ಷಣ ಸಚಿವ ಮತ್ತು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಕೂಡ ಈ ಕ್ರಮವನ್ನು ಖಂಡಿಸಿದ್ದಾರೆ. ಈ ಹಿಂದೆಯೂ ಈ ವಿಚಾರವನ್ನು ರಾಜ್ಯದ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ. ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತ ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನ ಎಂದು ವಾಗ್ದಾಳಿ ನಡೆಸಿದ್ದಾರೆ.ಬಿಬಿಎಂಪಿ ಹೊರ ಗುತ್ತಿಗೆ ಶಿಕ್ಷಕರ ಸೇವಾ ಪೂರೈಕೆ ಮಾಡಲು 3 ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ನೀಡಲಾಗಿದೆ. ಶಿಕ್ಷಕರ ನೇಮಕಾತಿ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ, ಎಂತಹ ಸ್ಥಿತಿ ತಲುಪಿತು ಶಿಕ್ಷಣ ಕ್ಷೇತ್ರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಬಿಬಿಎಂಪಿ 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆ ಶಿಕ್ಷಕರ ಸರಬರಾಜು ಮಾಡಲು ಈ ಬಾರಿ ಮೂರು ಸೆಕ್ಯೂರಿಟಿ ಏಜೆನ್ಸಿರವರಿಗೆ ಗುತ್ತಿಗೆ ನೀಡಲಾಗಿದೆ. ಭದ್ರತಾ ಸಿಬ್ಬಂದಿ ನೇಮಿಸುವ ಮೂರು ಸೆಕ್ಯೂರಿಟಿ ಏಜೆನ್ಸಿಗಳಿಗೆ ಯಾವ ಮಾನದಂಡ ಅನುಸಾರ ಗುತ್ತಿಗೆ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಶಿಕ್ಷಕರು ನೇಮಿಸಿಕೊಳ್ಳಲು ಸೇವೆ ಒದಗಿಸಲು ಶಿಕ್ಷಣ ಕ್ಷೇತ್ರದ ಅರಿವು ಇರುವವರು ಮತ್ತು ನುರಿತ ಏಜೆನ್ಸಿರವರಿಗೆ ನೀಡಬೇಕು. ಅದರೆ ಶಿಕ್ಷಕ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಿರುವುದು ಬಿಬಿಎಂಪಿಯ ವಿಚಿತ್ರ ವೈಖರಿ. ಈ ಹಿಂದೆ ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ಅದರೆ ಇಂದು ತರಾತುರಿಯಲ್ಲಿ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾದ್ದಾರಿ ಎದ್ದು ಕಾಣುತ್ತದೆ ಎಂದು ಕಿಡಿಕಾರಿದ್ದಾರೆ.
ಶಿಕ್ಷ ಣ ತಜ್ಞ ನಿರಂಜನ್ ಆರಾಧ್ಯ ಮಾತನಾಡಿ, ಬಿಬಿಎಂಪಿ ಭದ್ರತೆ ಅಥವಾ ಡಿಟೆಕ್ಟಿವ್ ಏಜೆನ್ಸಿಗಳಿಗೆ ಮಾನವ ಸಂಪನ್ಮೂಲ ಪೂರೈಸುವಂತೆ ಕೇಳುವುದು ಹೊಸದೇನಲ್ಲ. ಪಾಲಿಕೆಯು ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಅಥವಾ ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆಯ (ಡಯಟ್) ಸಹಾಯವನ್ನು ಪಡೆಯಬಹುದು ಅಥವಾ ತನ್ನದೇ ಆದ ಶೈಕ್ಷಣಿಕ ಸಂಸ್ಥೆಯನ್ನು ರಚಿಸಬಹುದು. ಅರ್ಜಿಗಳನ್ನು ಕರೆದು ಪರಿಶೀಲನೆ ಮಾಡಬಹುದು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ, ಏಜೆನ್ಸಿಗಳು ಭದ್ರತೆ ಮತ್ತು ಪತ್ತೇದಾರಿ ಸೇವೆಗಳಲ್ಲಿ ಮಾತ್ರವಲ್ಲದೆ ಶಿಕ್ಷಕರನ್ನು ಒದಗಿಸುತ್ತವೆ. ಕೆಲಸ ಮಾಡುತ್ತಿರುವ ಯಾವುದೇ ಶಿಕ್ಷಕರನ್ನು ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.