ಬೆಂಗಳೂರು: ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗವು 2019 ರಿಂದೀಚೆಗೆ 12.96 ಲಕ್ಷ ಜನರಿಗೆ ದಂಡ ವಿಧಿಸಿದ್ದು, ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ, ಬಯಲು ಶೌಚ ಸೇರಿದಂತೆ 41.70 ಕೋಟಿ ದಂಡವನ್ನು ಸಂಗ್ರಹ ಮಾಡಿದೆ.
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತೆ ಆರ್.ಪ್ರತಿಬಾ ಮಾತನಾಡಿ, ಪಾಲಿಕೆಯು ವಾರ್ಡ್ ಮಟ್ಟದಲ್ಲಿ ಮಾರ್ಷಲ್‌ಗಳು, ಆರೋಗ್ಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳನ್ನು ನೇಮಿಸಿದ್ದು, ಸಾರ್ವಜನಿಕರಲ್ಲಿ ಶಿಸ್ತು ಮತ್ತು ನಗರದ ವರ್ಚಸ್ಸು ಸುಧಾರಿಸಲು ವಿಶೇಷ ಅಭಿಯಾನಗಳನ್ನು ನಡೆಸಿದೆ. ಘನತ್ಯಾಜ್ಯ ನಿರ್ವಹಣೆಯಲ್ಲಿ ಜನರು ತಮ್ಮ ಮನೋಭಾವವನ್ನು ಬದಲಿಸಬೇಕು. ಕೆಲಸಕ್ಕೆ ತೆರಳುವ ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ತ್ಯಾಜ್ಯವನ್ನು ರಸ್ತೆಯ ಬಳಿ ಎಸೆಯುತ್ತಿದ್ದಾರೆ. ತ್ಯಾಜ್ಯ ನಿರ್ವಹಣೆಗೆ ಜನರ ಸಹಕಾರ ಬಹಳ ಮುಖ್ಯ ಎಂದು ಹೇಳಿದ್ದಾರೆ,
ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಸುರಿಯುವುದು, ಚರಂಡಿಗೆ ಎಸೆಯುವುದು, ಕಟ್ಟಡದ ಅವಶೇಷಗಳನ್ನು ಸುರಿಯುವುದು, ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ-ಎಸೆಯುವುದು, ಬಯಲು ಮೂತ್ರ ವಿಸರ್ಜನೆ ಮತ್ತು ಬಯಲು ಶೌಚಕ್ಕೆ ಸಾರ್ವಜನಿಕರಿಗೆ ದಂಡ ವಿಧಿಸಲು ಪ್ರಾರಂಭಿಸಿದೆ.ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಇಲಾಖೆ ನಿರ್ಬಂಧಗಳನ್ನು ವಿಧಿಸಿದಾಗ ಕೋವಿಡ್-ಸೂಕ್ತ ನಡವಳಿಕೆಯ ಭಾಗವಾಗಿ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮುಖಕ್ಕೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ವಿಧಿಸಲಾಗಿತ್ತು. ದಂಡದ ನಡುವಲ್ಲೂ ನಗರದಲ್ಲಿ ಬಯಲು ಶೌಚ ಹೆಚ್ಚಾಗಿರುವುದು ಕಳವಳಕಾರಿ ವಿಚಾರವಾಗಿದೆ. ಸೆಪ್ಟೆಂಬರ್ 2019 ರಿಂದ, 5,908 ಬಯಲು ಮಲವಿಸರ್ಜನೆಯ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 14.79 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಕೆ.ಆರ್.ಪುರಂ, ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಅನೇಕ ರಿಯಲ್ ಎಸ್ಟೇಟ್ ಮಾಲೀಕರು ಕಟ್ಟಡ ಕಾರ್ಮಿಕರಿಗೆ ಯಾವುದೇ ನೈರ್ಮಲ್ಯ ಮತ್ತು ವಸತಿ ಕಲ್ಪಿಸದ ಕಾರಣ, ಕಾರ್ಮಿಕರು ಖಾಲಿ ನಿವೇಶನಗಳನ್ನೇ ಶೌಚಕ್ಕೆ ಬಳಕೆ ಮಾಡುತ್ತಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.