ಪರಿಷತ್ ಚುನಾವಣೆ: ಅಭ್ಯರ್ಥಿ ಆಯ್ಕೆ ಕಗ್ಗಂಟು, ಸಿದ್ದು-ಡಿಕೆಶಿ ಇಂದು ದೆಹಲಿಗೆ

ಪರಿಷತ್ ಚುನಾವಣೆ: ಅಭ್ಯರ್ಥಿ ಆಯ್ಕೆ ಕಗ್ಗಂಟು, ಸಿದ್ದು-ಡಿಕೆಶಿ ಇಂದು ದೆಹಲಿಗೆ

Share

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರಕಲಿರುವ ಏಳು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಂಗಳವಾರ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

11 ಸ್ಥಾನಗಳ ಪೈಕಿ ಏಳು ಕಾಂಗ್ರೆಸ್‌ಗೆ ದೊರಕಲಿದ್ದು, ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಹಲವು ಮಂದಿ ಹೆಚ್ಚು ಆಕಾಂಕ್ಷಿ ಗಳಿದ್ದು, ಟಿಕೆಟ್ ಗಾಗಿ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಲಾಬಿ ನಡೆಸುತ್ತಿದ್ದವರು ಇದೀಗ ದೆಹಲಿಯತ್ತ ಮುಖ ಮಾಡಿದ್ದಾರೆ.

ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಅಂತಿಮಗೊಳಿಸಿದ್ದು, ಪಟ್ಟಿಗೆ ಹೈಕಮಾಂಡ್ ನಿಂದ ಒಪ್ಪಿಗೆ ಪಡೆಯಲು ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕೆಲವರು ಈಗಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಏತನ್ಮಧ್ಯೆ ಸಚಿವ ಎನ್‌ಎಸ್ ಬೋಸರಾಜು ಅವರ ನಾಮಪತ್ರವನ್ನು ಹೈಕಮಾಂಡ್ ತೆರವುಗೊಳಿಸಿದೆ. ಆದರೆ ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಲಾ ಇಬ್ಬರು ನಾಮನಿರ್ದೇಶಿತರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ಹೊರತುಪಡಿಸಿ ಬೇರೆ ಸಮುದಾಯದ ಎರಡನೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಿವಕುಮಾರ್ ಅವರು ಒಕ್ಕಲಿಗ ಅಭ್ಯರ್ಥಿ ಹಾಗೂ ಬೇರೆ ಸಮುದಾಯದ ಅಭ್ಯರ್ಥಿಯನ್ನು ಪರಿಗಣಿಸುತ್ತಿದ್ದು, ಖರ್ಗೆ ಅವರು ಎಸ್‌ಸಿ ಸಮುದಾಯದ ಸದಸ್ಯ, ಲಿಂಗಾಯತ ಅಥವಾ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಲಂಬಾಣಿ ಸಮುದಾಯದ ಅಭ್ಯರ್ಥಿಯನ್ನು ಖರ್ಗೆ ಪರಿಗಣಿಸಬಹುದು ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಆಯಾ ಪ್ರದೇಶಗಳಲ್ಲಿ ತಮ್ಮ ವರ್ಚಸ್ಸನ್ನು ಬಲಪಡಿಸಲು ಸಹಾಯ ಮಾಡುವ, ತಮ್ಮ ನಿಷ್ಠಾವಂತರಿಗೂ ಮೂವರೂ ನಾಯಕರು ಟಿಕೆಟ್ ನೀಡಿದರೂ ನೀಡಬಹುದು ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ತಂದೆಯ ಅನುಪಸ್ಥಿತಿಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಅಧಿಕೃತ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗಿರುವುದರಿಂದ ಯತೀಂದ್ರ ಅವರಿಗೆ ಎಂಎಲ್‌ಸಿ ಆಗುವುದು ಅನಿವಾರ್ಯವಾಗಿದೆ. ಇದು ಸಿದ್ದರಾಮಯ್ಯ ಮತ್ತು ಯತೀಂದ್ರ ಅವರಿಗೆ ಭವಿಷ್ಯದ ಪ್ರಯತ್ನಗಳಿಗೆ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.ಏತನ್ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಎಂಬಂತೆ ಕೆಲವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿದ್ದು, ಕೆ ಗೋವಿಂದರಾಜು, ರಮೇಶ್ ಬಾಬು, ಎಎನ್ ನಟರಾಜ್ ಗೌಡ, ಐವನ್ ಡಿಸೋಜಾ, ವಿಆರ್ ಸುದರ್ಶನ್, ವಿನಯ್ ಕಾರ್ತಿಕ್, ಎಂ ನಾರಾಯಣಸ್ವಾಮಿ, ವಿ ಎಸ್ ಉಗ್ರಪ್ಪ, ಬಿವಿ ಶ್ರೀನಿವಾಸ್, ಕೆಪಿ ನಂಜುಂಡಿ, ತೇಜಸ್ವಿನಿ ಗೌಡ, ಡಾ.ಪುಷ್ಪಾ ಅಮರನಾಥ್ ಅವರು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.

ಇದೇ ವೇಳೆ ಎರಡು ಸ್ಥಾನಗಳು ತೆರವುಗೊಂಡಾಗ ಅಕ್ಟೋಬರ್‌ನಲ್ಲಿ ರಾಜ್ಯಪಾಲರ ಮೂಲಕ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗುವುದು ಎಂದು ಕೆಲವು ಆಕಾಂಕ್ಷಿಗಳಿಗೆ ಹೈಕಮಾಂಡ್ ಭರವಸೆ ನೀಡುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ಯು.ಬಿ.ವೆಂಕಟೇಶ್ ಅವರ ಅವಧಿ ಮುಗಿಯುತ್ತಿದ್ದಂತೆ ಬ್ರಾಹ್ಮಣ ಕೋಟಾದಡಿ ವಿಜಯ್ ಕೆ.ಮುಳಗುಂದ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್‌ 3 ಕೊನೆಯ ದಿನ. ಜೂನ್‌ 4ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್‌ 6 ಕೊನೆಯ ದಿನ. ಅಗತ್ಯವಿದ್ದಲ್ಲಿ ಜೂನ್‌ 13ಕ್ಕೆ ಮತದಾನ ನಡೆಯಲಿದೆ.


Share