ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ: ಇಂದು ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ: ಇಂದು ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ

Share

ಬೆಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಾವಿದ್ದಲ್ಲಿಂದಲೇ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಪ್ರಜ್ವಲ್ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಕಳೆದ ಏಪ್ರಿಲ್ 27 ರಂದು ಭಾರತದಿಂದ ಪಲಾಯನ ಮಾಡಿದ್ದರು.

ಮೂವರು ಆರೋಪಿಗಳ ಬಂಧನ, ನಾಲ್ವರು ಆರೋಪಿಗಳ ಜಾಮೀನು ಅರ್ಜಿ;

ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೊ ಮಾಡಿ ತನಿಖೆಗೆ ಹಾಜರಾಗುವುದಾಗಿ ಹೇಳಿಕೆ ನೀಡಿರುವ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳ ತನಿಖೆ ಚುರುಕಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ವಿದೇಶದಿಂದ ಪ್ರಜ್ವಲ್​ ಆಗಮಿಸುತ್ತಿದ್ದಂತೆಯೇ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಿದೇಶದಿಂದ ಬರುವ ಎಲ್ಲಾ ವಿಮಾನಗಳ ಟಿಕೆಟ್​ಗಳ ಮೇಲೆ ಎಸ್​ಐಟಿ ನಿಗಾ ಇಟ್ಟಿದೆ.
ಈಗಾಗಲೇ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ಇಂದು ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.

ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ:

ಮೇ 31ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗುವ ಮುಂಚೆಯೇ ವಶಕ್ಕೆ ಪಡೆಯಲು ಎಸ್​ಐಟಿ ಮುಂದಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮತ್ತು ಅರೆಸ್ಟ್​ ವಾರಂಟ್​ ಸಹ ಜಾರಿಯಾಗಿದೆ.

ಹೀಗಾಗಿ ಯಾವ ವಿಮಾನದಲ್ಲಿ ಪ್ರಜ್ವಲ ಬರುತ್ತಾರೆ ಎಂದು ಎಸ್​ಐಟಿ ಮಾಹಿತಿ ಪಡೆದುಕೊಂಡು ವಶಕ್ಕೆ ಪಡೆಯಲಿದೆ. ಅದಕ್ಕೂ ಮೊದಲು ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್​ ವಶಕ್ಕೆ ಪಡೆಯಲಿದ್ದಾರೆ. ಬಳಿಕ ಎಸ್ಐಟಿಗೆ ಒಪ್ಪಿಸಲಿದ್ದಾರೆ. ಅದಾದ ಬಳಿಕ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರಿಗೆ ಮೆಡಿಕಲ್ ಚೆಕಪ್ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.


Share