RLV ಪುಷ್ಪಕ್ ಚಿತ್ರದುರ್ಗ ATRನಲ್ಲಿ ಯಶಸ್ವಿ ಲ್ಯಾಂಡಿಂಗ್! ISRO ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ…

RLV ಪುಷ್ಪಕ್ ಚಿತ್ರದುರ್ಗ ATRನಲ್ಲಿ ಯಶಸ್ವಿ ಲ್ಯಾಂಡಿಂಗ್! ISRO ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ…

Share

ಬಾಹ್ಯಾಕಾಶ ಕ್ಷೇತ್ರದಲ್ಲಿ ವಿನೂತನ ಸಾಧನೆಗಳನ್ನು ನಿರ್ಮಿಸಿ, ಜಾಗತಿಕವಾಗಿ ಅಪಾರ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ತನ್ನ ಮೂರನೇ ರಿಯೂಸೆಬಲ್ ಲಾಂಚ್ ವೆಹಿಕಲ್ (ಆರ್‌ಎಲ್‌ವಿ) ಲ್ಯಾಂಡಿಂಗ್ ಎಕ್ಸ್‌ಪರಿಮೆಂಟ್ (ಎಲ್‌ಇಎಕ್ಸ್) (ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ) ಯಶಸ್ವಿಯಾಗಿ ನೆರವೇರಿದೆ ಎಂದು ಘೋಷಿಸಿತು. ಈ ಬಾರಿಯ ಪರೀಕ್ಷೆಯಲ್ಲಿ, ಉಡಾವಣಾ ವಾಹನ ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶಗಳಲ್ಲೂ ತಾನು ಸ್ವಂತವಾಗಿ ಲ್ಯಾಂಡಿಂಗ್ ನಡೆಸಬಲ್ಲೆ ಎನ್ನುವುದನ್ನು ಸಾಬೀತುಪಡಿಸಿತು.

ಈ ಪರೀಕ್ಷೆ, ಬಾಹ್ಯಾಕಾಶದಿಂದ ಅತ್ಯಂತ ವೇಗವಾಗಿ ಭೂಮಿಗೆ ಮರಳುವ ಉಡಾವಣಾ ವಾಹನದ ಆಗಮನ ಮತ್ತು ಲ್ಯಾಂಡಿಂಗ್ ಸನ್ನಿವೇಶವನ್ನು ಪರೀಕ್ಷೆಗೊಳಪಡಿಸಿತು. ಈ ಪರೀಕ್ಷೆಯ ಯಶಸ್ಸು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರಿಯೂಸೆಬಲ್ ಲಾಂಚ್ ವೆಹಿಕಲ್ (ಮರುಬಳಕೆ ಉಡಾವಣಾ ವಾಹನ – ಆರ್‌ಎಲ್‌ವಿ) ಅಭಿವೃದ್ಧಿ ಪಡಿಸಲು ಅವಶ್ಯಕ ಕೌಶಲಗಳನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ ಎಂದು ಇಸ್ರೋ ಹೇಳಿದೆ.

ಲ್ಯಾಂಡಿಂಗ್ ಎಕ್ಸ್‌ಪರಿಮೆಂಟ್‌ನ ಕೊನೆಯ ಹಂತದ ಈ ಪರೀಕ್ಷೆ (ಎಲ್‌ಇಎಕ್ಸ್-03) ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ಭಾನುವಾರ ಬೆಳಗ್ಗೆ 7:10ಕ್ಕೆ ನೆರವೇರಿತು.

ಆರ್‌ಎಲ್‌ವಿ ಎಲ್ಇಎಕ್ಸ್-01 ಮತ್ತು ಎಲ್ಇಎಕ್ಸ್-02 ಯೋಜನೆಗಳ ಯಶಸ್ಸಿನ ಬಳಿಕ, ಇಸ್ರೋ ಕೊನೆಯದಾಗಿ ಆರ್‌ಎಲ್‌ವಿ ಎಲ್ಇಎಕ್ಸ್-03 ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿತ್ತು. ಈ ಪರೀಕ್ಷೆ ಉಡಾವಣಾ ವಾಹನ ಸ್ವಂತ ಬಲದಲ್ಲಿ ಲ್ಯಾಂಡಿಂಗ್ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಕಳೆದ ಬಾರಿಯ ಪರೀಕ್ಷೆಯಾದ ಎಲ್ಇಎಕ್ಸ್-02ನಲ್ಲಿ ಉಡಾವಣಾ ವಾಹನವನ್ನು 150 ಮೀಟರ್‌ಗಳ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಎಲ್ಇಎಕ್ಸ್-03ಗೆ ಇನ್ನೂ ಸವಾಲಿನ ಪರಿಸ್ಥಿತಿಯನ್ನು ನಿರ್ಮಿಸಿ, ಇನ್ನಷ್ಟು ವಿಶಾಲವಾದ 500 ಮೀಟರ್ ವ್ಯಾಪ್ತಿಯಲ್ಲಿ ಉಡಾವಣಾ ವಾಹನವನ್ನು ಬಿಡುಗಡೆಗೊಳಿಸಲಾಯಿತು.

‘ಪುಷ್ಪಕ್’ ಎಂದು ಹೆಸರಿಸಲಾಗಿರುವ, ರೆಕ್ಕೆಗಳನ್ನು ಹೊಂದಿರುವ ಉಡಾವಣಾ ವಾಹನವನ್ನು ಭಾರತೀಯ ವಾಯು ಸೇನೆಯ ಚಿನೂಕ್ ಹೆಲಿಕಾಪ್ಟರ್ 4.5 ಕಿಲೋಮೀಟರ್ ಎತ್ತರದಿಂದ, ರನ್‌ವೇ ಇಂದ 4.5 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಬಿಡುಗಡೆಗೊಳಿಸಿತು. ಆ ಬಳಿಕ, ಪುಷ್ಪಕ್ ಸ್ವಯಂಚಾಲಿತವಾಗಿ ತನ್ನ ಚಲನೆಯ ಪಥವನ್ನು ಸರಿದೂಗಿಸಿ, ರನ್‌ವೇ ಕಡೆಗೆ ಸಾಗಿ, ನಿಖರವಾದ, ಸಮತಲ ಲ್ಯಾಂಡಿಂಗ್ ಅನ್ನು ರನ್‌ವೇಯ ಮಧ್ಯಭಾಗದಲ್ಲಿ ಸಮರ್ಪಕವಾಗಿ ನೆರವೇರಿಸಿತು ಎಂದು ಇಸ್ರೋ ವರದಿ ತಿಳಿಸಿದೆ.

ಈ ಉಡಾವಣಾ ವಾಹನ ಅತ್ಯಂತ ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಹೊಂದಿರುವುದರಿಂದ, ಇದು ಪ್ರತಿ ಗಂಟೆಗೆ 320 ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಲ್ಯಾಂಡಿಂಗ್ ನಡೆಸಬೇಕಾಗಿತ್ತು. ಇದರ ವೇಗವನ್ನು ಇತರ ವಿಮಾನಗಳ ಲ್ಯಾಂಡಿಂಗ್‌ಗೆ ಹೋಲಿಸಿ ನೋಡುವುದಾದರೆ, ವಾಣಿಜ್ಯಿಕ ವಿಮಾನಗಳು ಸಾಮಾನ್ಯವಾಗಿ ಪ್ರತಿ ಗಂಟೆಗೆ 260 ಕಿಲೋಮೀಟರ್ ವೇಗದಲ್ಲಿ ಮತ್ತು ಯುದ್ಧ ವಿಮಾನಗಳು ಪ್ರತಿ ಗಂಟೆಗೆ ಅಂದಾಜು 280 ಕಿಲೋಮೀಟರ್ ವೇಗದಲ್ಲಿ ಲ್ಯಾಂಡಿಂಗ್ ನಡೆಸುತ್ತವೆ.

ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಎಂದರೆ, ಒಂದು ವೈಮಾನಿಕ ವಾಹನ ಅಥವಾ ವಸ್ತು, ತಾನು ಅನುಭವಿಸುವ ಎಳೆತಕ್ಕೆ (ಡ್ರ್ಯಾಗ್) ಹೋಲಿಸಿದರೆ, ಕಡಿಮೆ ಲಿಫ್ಟ್ (ಎತ್ತುವಿಕೆ) ಅನ್ನು ಅನುಭವಿಸುತ್ತದೆ. ಇದರ ಪರಿಣಾಮವಾಗಿ, ಹಾರಾಟದ ದಕ್ಷತೆ ಕಡಿಮೆಯಾಗಿ, ಇಂಧನ ಬಳಕೆ ಹೆಚ್ಚಾಗುತ್ತದೆ. ಗಾಳಿಯಲ್ಲಿ ಅಥವಾ ದ್ರವದಲ್ಲಿ ವಾಹನ ಅಥವಾ ವಸ್ತುವಿನ ಚಲನೆಯನ್ನು ತಡೆಯುವ ಬಲವನ್ನು ‘ಡ್ರ್ಯಾಗ್’ ಎನ್ನಲಾಗುತ್ತದೆ. ಈ ಡ್ರ್ಯಾಗ್ ವಾಹನದ ಚಲನೆಯನ್ನು ನಿಧಾನಗೊಳಿಸುವ ಕಾರಣ, ಅದನ್ನು ಮೀರಲು ವಾಹನಕ್ಕೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಬೀಳುತ್ತದೆ.

ಪುಷ್ಪಕ್ ಲ್ಯಾಂಡಿಂಗ್ ನಡೆಸಿದ ಬಳಿಕ, ಬ್ರೇಕ್ ಪ್ಯಾರಾಶೂಟ್ ಬಳಸಿಕೊಂಡು, ಅದರ ವೇಗವನ್ನು ಪ್ರತಿ ಗಂಟೆಗೆ ಅಂದಾಜು ನೂರು ಕಿಲೋಮೀಟರ್‌ಗಳಷ್ಟು ಕಡಿಮೆಗೊಳಿಸಲಾಯಿತು ಎಂದು ಇಸ್ರೋ ವಿವರಿಸಿದೆ. ಆ ಬಳಿಕ, ಲ್ಯಾಂಡಿಂಗ್ ಗೇರ್ ಬ್ರೇಕ್‌ಗಳನ್ನು ಬಳಸಿ, ಉಡಾವಣಾ ವಾಹನವನ್ನು ಇನ್ನಷ್ಟು ನಿಧಾನಗೊಳಿಸಿ, ಅದು ರನ್‌ವೇ ಮೇಲೆ ನಿಲ್ಲುವಂತೆ ಮಾಡಲಾಯಿತು.

ಈ ಯೋಜನೆಯಲ್ಲಿ, ಹೆಚ್ಚಿನ ವೇಗದಲ್ಲಿರುವ ಬಾಹ್ಯಾಕಾಶ ವಾಹನ ಹೇಗೆ ಭೂಮಿಗೆ ಪ್ರವೇಶಿಸುತ್ತದೆ, ಹೇಗೆ ಲ್ಯಾಂಡಿಂಗ್ ನಡೆಸುತ್ತದೆ ಎನ್ನುವುದನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆ, ಬಾಹ್ಯಾಕಾಶದಿಂದ ಮರಳುವ ಉಡಾವಣಾ ವಾಹನದ ಚಲನೆಯನ್ನು ಹೋಲುವಂತಿತ್ತು ಎಂದು ಇಸ್ರೋ ಮಾಹಿತಿ ನೀಡಿದೆ. ಈ ಯಶಸ್ವಿ ಪರೀಕ್ಷೆ, ಮರುಬಳಕೆ ಉಡಾವಣಾ ವಾಹನಗಳನ್ನು (ಆರ್‌ಎಲ್‌ವಿ) ನಿರ್ಮಿಸಲು ಅವಶ್ಯಕವಾದ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಅವಶ್ಯಕ ಕೌಶಲಗಳನ್ನು ಇಸ್ರೋ ಹೊಂದಿದೆ ಎಂದು ಖಾತ್ರಿಪಡಿಸಿದೆ.

ಮುಂದೆ ಚಲಿಸುವ ಮತ್ತು ಬದಿಗೆ ಚಲಿಸುವಲ್ಲಿ ಉಂಟಾಗುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ, ಆಧುನಿಕ ಗೈಡೆನ್ಸ್ ಅಲ್ಗಾರಿದಂ (ಸೂಕ್ತ ಸೂಚನೆಗಳು) ವ್ಯವಸ್ಥೆಯ ಬಳಕೆಯನ್ನೂ ಈ ಪರೀಕ್ಷೆ ಖಾತ್ರಪಡಿಸಿದೆ ಎಂದು ಇಸ್ರೋ ಹೇಳಿದೆ. ಮುಂದಿನ ದಿನಗಳಲ್ಲಿ, ಬಾಹ್ಯಾಕಾಶದಿಂದ ಭೂಮಿಗೆ ಉಡಾವಣಾ ವಾಹನಗಳು ಮರು ಪ್ರವೇಶಿಸುವ ಸಂದರ್ಭದಲ್ಲಿ ಈ ವ್ಯವಸ್ಥೆ ಅತ್ಯಂತ ಮುಖ್ಯ ಪಾತ್ರ ನಿರ್ವಹಿಸಲಿದೆ.

ಆರ್‌ಎಲ್‌ವಿ ಎಲ್ಇಎಕ್ಸ್ ವಿವಿಧ ಸೆನ್ಸರ್‌ಗಳ ಸಂಯೋಜನೆಯನ್ನು ಬಳಸಿಕೊಳ್ಳುತ್ತದೆ. ಇದರಲ್ಲಿ ಇನರ್ಷ್ಯಲ್ ಸೆನ್ಸರ್, ರೇಡಾರ್ ಆಲ್ಟಿಮೀಟರ್, ಫ್ಲಷ್ ಏರ್ ಡೇಟಾ ಸಿಸ್ಟಮ್, ಸ್ಯೂಡೋಲೈಟ್ ಸಿಸ್ಟಮ್, ಮತ್ತು ನಾವಿಕ್ (NavIC) ವ್ಯವಸ್ಥೆಗಳು ಸೇರಿವೆ. ಆರ್‌ಎಲ್‌ವಿ ಎಲ್ಇಎಕ್ಸ್-03 ಯೋಜನೆಯಲ್ಲಿ ಹಿಂದಿನ ಎಲ್ಇಎಕ್ಸ್-02 ಯೋಜನೆಯಲ್ಲಿ ಬಳಸಲಾದ ವಿಂಗ್ಡ್ ಬಾಡಿ ಮತ್ತು ಹಾರಾಟ ವ್ಯವಸ್ಥೆಗಳನ್ನು ಯಾವುದೇ ಬದಲಾವಣೆ ಮಾಡಿಕೊಳ್ಳದೆ ಬಳಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಇದು ಹಲವು ಬಾರಿ ವಿವಿಧ ಯೋಜನೆಗಳಿಗಾಗಿ ಮರುಬಳಕೆ ಮಾಡಬಲ್ಲ ಪ್ರಬಲ ಹಾರಾಟ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇಸ್ರೋದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇನರ್ಷ್ಯಲ್ ಸೆನ್ಸರ್: ಇದು ಚಲನೆ ಮತ್ತು ತಿರುಗುವಿಕೆಯನ್ನು ಅಳೆಯುವ ಉಪಕರಣವಾಗಿದೆ. ಈ ಉಪಕರಣ, ಒಂದು ವಸ್ತು ಎಷ್ಟು ವೇಗವಾಗಿ ಸಾಗುತ್ತಿದೆ, ಅಥವಾ ನಿಧಾನಗೊಂಡಿದೆ, ಅದು ಹೇಗೆ ಸುತ್ತುತ್ತಿದೆ ಎನ್ನುವುದನ್ನು ಸುತ್ತಮುತ್ತಲಿನ ವಸ್ತು, ಪ್ರದೇಶಗಳನ್ನು ಗಮನಿಸದೆಯೇ ತಿಳಿದುಕೊಳ್ಳಬಲ್ಲದು.

ರೇಡಾರ್ ಆಲ್ಟಿಮೀಟರ್: ಇದು ಭೂಮಿಯ ಮೇಲೆ ಎಷ್ಟು ಎತ್ತರದಲ್ಲಿ ಏರ್‌ಕ್ರಾಫ್ಟ್ ಸಾಗುತ್ತಿದೆ ಎನ್ನುವುದನ್ನು ಅಳೆಯುವ ಉಪಕರಣವಾಗಿದೆ. ರೇಡಾರ್ ಆಲ್ಟಿಮೀಟರ್ ಭೂಮಿಗೆ ತಾಗಿ, ಮರಳಿ ಬರುವ ರೇಡಿಯೋ ತರಂಗಗಳನ್ನು ಕಳುಹಿಸಿ, ಪೈಲಟ್‌ಗೆ ನಾವು ಭೂಮಿಯಿಂದ ನಿಖರವಾಗಿ ಎಷ್ಟು ಎತ್ತರದಲ್ಲಿದ್ದೇವೆ ಎಂಬ ಮಾಹಿತಿ ಒದಗಿಸುತ್ತದೆ.

ಫ್ಲಷ್ ಏರ್ ಡೇಟಾ ಸಿಸ್ಟಮ್: ವಿಮಾನದ ಮೇಲ್ಮೈಯಿಂದ ಯಾವುದೇ ಭಾಗ ಹೊರಬರುವ ಅವಶ್ಯಕತೆ ಇಲ್ಲದೆ, ವಿಮಾನದ ವೇಗ ಮತ್ತು ಎತ್ತರವನ್ನು ನಿಖರವಾಗಿ ಸೂಚಿಸುತ್ತದೆ. ಈ ಸೆನ್ಸರ್ ವಿಮಾನದ ಮೇಲ್ಮೈಯಲ್ಲಿರುವ ಸಣ್ಣ ತೂತುಗಳನ್ನು ಬಳಸಿಕೊಂಡು, ಗಾಳಿಯ ಒತ್ತಡ ಮತ್ತು ತಾಪಮಾನವನ್ನು ಅಳೆಯುತ್ತದೆ.

ಸ್ಯೂಡೋಲೈಟ್ ಸಿಸ್ಟಮ್: ಇದು ಒಂದು ರೀತಿ ಭೂ ಆಧಾರಿತ ಜಿಪಿಎಸ್ ವ್ಯವಸ್ಥೆಯಂತೆ ಕಾರ್ಯಾಚರಿಸುತ್ತದೆ. ಆ ಮೂಲಕ, ಜಿಪಿಎಸ್ ಸಮರ್ಪಕವಾಗಿ ಕಾರ್ಯಾಚರಿಸದ ಸ್ಥಳಗಳಲ್ಲೂ ವಾಹನ ಅಥವಾ ವಸ್ತುಗಳಿಗೆ ತಾವು ಎಲ್ಲಿದ್ದೇವೆ ಎಂದು ತಿಳಿಯಲು ನೆರವಾಗುತ್ತದೆ.

ನಾವಿಕ್ (NavIC): ನಾವಿಕ್ ಭಾರತದ ಸ್ವಂತ ಸಂಚರಣ (ನ್ಯಾವಿಗೇಶನ್) ವ್ಯವಸ್ಥೆಯಾಗಿದೆ. ಇದು ಭಾರತ ಮತ್ತು ಸುತ್ತಲಿನ ವಾಹನಗಳು ಮತ್ತು ಜನರಿಗೆ ಅವಶ್ಯಕ ಸ್ಥಳಗಳನ್ನು ಹುಡುಕಲು ನೆರವಾಗುತ್ತದೆ. ಇದು ಜಿಪಿಎಸ್ ರೀತಿಯ ವ್ಯವಸ್ಥೆಯಾದರೂ, ನಿರ್ದಿಷ್ಟವಾಗಿ ಭಾರತಕ್ಕೆ ನೆರವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ನಾವಿಕ್ ಎನ್ನುವುದು ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಶನ್ ಎನ್ನುವುದರ ಹೃಸ್ವರೂಪವಾಗಿದೆ.


Share