ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 10 ದಿನದಲ್ಲಿ 4ನೇ ಘಟನೆ

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 10 ದಿನದಲ್ಲಿ 4ನೇ ಘಟನೆ

Share

ಪಾಟ್ನಾ: ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ಬುಧವಾರ ಮತ್ತೊಂದು ಸೇತುವೆಯೊಂದು ಕುಸಿದು ಬಿದ್ದಿದೆ. ಇದು 10 ದಿನಗಳಲ್ಲಿ ರಾಜ್ಯದಲ್ಲಿ ನಡೆದ ನಾಲ್ಕನೇ ಘಟನೆಯಾಗಿದೆ. 13 ವರ್ಷಗಳಷ್ಟು ಹಳೆಯದಾದ ಸೇತುವೆಯನ್ನು ಬನ್ಸ್ಬರಿ ಶ್ರವಣ ಚೌಕ್ ಬಳಿ ಮಾರಿಯಾ ನದಿಯ ಉಪನದಿಗೆ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಗೆ 70 ಮೀಟರ್ ಉದ್ದದ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೇತುವೆಯ ಮಧ್ಯ ಭಾಗ ಕುಸಿದು ಬಿದ್ದು, ವೇಗವಾಗಿ ಹರಿಯುವ ನದಿಗೆ ತಾಗಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಜ್ಯ ಗ್ರಾಮೀಣ ಕಾಮಗಾರಿ ಇಲಾಖೆ 2011ರಲ್ಲಿ ಸೇತುವೆ ನಿರ್ಮಿಸಿತ್ತು. “ಬಹದ್ದೂರ್‌ಗಂಜ್ ಬ್ಲಾಕ್‌ನಲ್ಲಿರುವ ಸೇತುವೆಯು 70 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ನೇಪಾಳದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಾಗಿ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತುಷಾರ್ ಸಿಂಗ್ಲಾ ಹೇಳಿದ್ದಾರೆ.ಸೇತುವೆಯ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದೆ ಎಂದು ಮೂಲಗಳು ಹೇಳಿವೆ. ಜೂನ್ 23 ರಂದು, ಪೂರ್ವ ಚಂಪಾರಣ್ ಜಿಲ್ಲೆಯ ಘೋರಸಾಹನ್ ಬ್ಲಾಕ್ ಪ್ರದೇಶದ ಅಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಣ್ಣ ಸೇತುವೆ ಕುಸಿದಿತ್ತು. ಆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೇ ರೀತಿ, ಜೂನ್ 22 ರಂದು ಸಿವಾನ್ ಜಿಲ್ಲೆಯಲ್ಲಿ, ಜೂನ್ 18 ರಂದು, ಅರಾರಿಯಾ ಜಿಲ್ಲೆಯಲ್ಲಿ ಸುಮಾರು 180 ಮೀಟರ್ ಉದ್ದದ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿದು ಬಿದ್ದಿತ್ತು. 12 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ನಿರ್ಮಿಸಲಾದ ಸೇತುವೆಗಳು ಮತ್ತು ಮೋರಿಗಳ ಸ್ಥಿತಿಗತಿ ವರದಿ ಪಡೆಯಲು ರಾಜ್ಯ ಸರ್ಕಾರದ ಗ್ರಾಮೀಣ ಕಾಮಗಾರಿ ಇಲಾಖೆ ಪರಿಶೀಲನಾ ಸಭೆ ನಡೆಸಿದ್ದು, ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶವನ್ನು ಅಧಿಕಾರಿಗಳಿಗೆ ನೀಡಲಾಗಿದೆ.


Share