ಸೇಲಂ: ಸೇಲಂನ ಫೇರ್‌ಲ್ಯಾಂಡ್ಸ್‌ನಲ್ಲಿ ರಾತ್ರಿ ಊಟ ಮಾಡಿದ ನಂತರ ಏಳು ವರ್ಷದ ಬಾಲಕಿಯೊಬ್ಬಳಿಗೆ ಮೂಗಿನಿಂದ ರಕ್ತಸ್ರಾವವಾಗಿದ್ದು, ಹಠಾತ್ ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂತ್ರಸ್ತೆಯನ್ನು ಎಸ್ ಲಕ್ಷ್ಮಿಕುಮಾರಿ ಎಂದು ಗುರುತಿಸಲಾಗಿದ್ದು, ಆಕೆ ಫ್ರೈಡ್ ರೈಸ್ ಅನ್ನು ಇಷ್ಟಪಡುತ್ತಿದ್ದಳು. ಆಕೆ ಅದನ್ನು ನಿಯಮಿತವಾಗಿ ತಿನ್ನುತ್ತಿದ್ದಳು. ಶುಕ್ರವಾರ ರಾತ್ರಿ ಫ್ರೈಡ್ ರೈಸ್, ಚಪಾತಿ ಮತ್ತು ಬದನೆಕಾಯಿ ಕರಿಯನ್ನು ತಿಂದ ಬಳಿಕ ರಾತ್ರಿ 10 ಗಂಟೆಯ ಸುಮಾರಿಗೆ ಮೂಗಿನಲ್ಲಿ ರಕ್ತಸ್ರಾವ ಆರಂಭವಾಯಿತು ಎಂದು ಆಕೆಯ ತಾಯಿ ಎಸ್ ಪೂಜಾಕುಮಾರಿ ಟಿಎನ್ಐಇಗೆ ತಿಳಿಸಿದ್ದಾರೆ.
ಪೋಷಕರು ಆಕೆಯನ್ನು ಕೂಡಲೇ ಸೇಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಆದರೆ ಆವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಫೇರ್‌ಲ್ಯಾಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಾಥಮಿಕ ಶವಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ದ್ರವಗಳ ಉಪಸ್ಥಿತಿಯನ್ನು ಸೂಚಿಸಿದ್ದು, ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ವಿವರವಾದ ವಿಶ್ಲೇಷಣೆಗಾಗಿ ಈ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಫ್ರೈಡ್ ರೈಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆಕೆಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿರಬಹುದು, ಇದು ಮಾರಣಾಂತಿಕ ಮೂಗಿನ ರಕ್ತಸ್ರಾವಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಮತ್ತು ಮಾದರಿಗಳ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ಎಂದು ಫೇರ್‌ಲ್ಯಾಂಡ್ಸ್ ಪೊಲೀಸ್ ಇನ್‌ಸ್ಪೆಕ್ಟರ್ ಟಿಎನ್ಐಇಗೆ ತಿಳಿಸಿದ್ದಾರೆ.