ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 2 ಮಿಲಿಯನ್ ಚದರ ಅಡಿ ಬ್ಯುಸಿನೆಸ್ ಪಾರ್ಕ್, ಅತ್ಯಾಧುನಿಕ ಹೋಟೆಲ್ ಹಾಗೂ ಮನರಂಜನೆಯ ತಾಣ ನಿರ್ಮಿಸಲು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ನ ಅಂಗಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (BACL) ಮುಂದಾಗಿದೆ.
ಈ ಕುರಿತು ಮಾತನಾಡಿರುವ ಬಿಎಸಿಎಲ್‌ನ ಸಿಇಒ ರಾವ್ ಮುನುಕುಟ್ಲ ಅವರು, ತಾಂತ್ರಿಕ ಆವಿಷ್ಕಾರದ ಕಡೆಗೆ ಅತ್ಯಂತ ಧನಾತ್ಮಕವಾಗಿ ಬಿಎಸಿಎಲ್ ದಾಪುಗಾಲು ಇಡುತ್ತಿದ್ದು, ಈ ನಿಟ್ಟಿನಲ್ಲಿ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಸುತ್ತಮುತ್ತಲಿನ ಪ್ರದೇಶವನ್ನು ಅತ್ಯಾಧುನಿಕವಾಗಿ ಪರಿವರ್ತನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದರ ಅನ್ವಯ ಈ ಪ್ರದೇಶದಲ್ಲಿ ಎರಡು ಮಿಲಿಯನ್ ಚದರ ಅಡಿಯ ಬ್ಯುಸಿನೆಸ್ ಪಾರ್ಕ್ ಹಾಗೂ 775 ರೂಮ್‌ಗಳನ್ನು ಹೊಂದಿರುವ ಹೋಟೆಲ್ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಹೊಸ ಪ್ರಾಜೆಕ್ಟ್‌ನಲ್ಲಿ ಹಸಿರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವವಾಗಿ ಕೆಲಸ ಮಾಡಲಾಗುತ್ತಿದೆ. ಏರ್‌ಪೋರ್ಟ್ ಸಿಟಿಯಲ್ಲಿ ಮುಂಬರುವ ಮೆಟ್ರೋ ನಿಲ್ದಾಣವು ಉತ್ತರ ಭಾಗದಿಂದ ಬಿಸಿನೆಸ್ ಪಾರ್ಕ್‌ಗೆ ಮಹತ್ವದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಅನುಕೂಲಕರ ಪ್ರವೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.ಬಿಎಸಿಎಲ್‌ನ ಈ ಹೂಡಿಕೆಯು ಏರ್‌ಪೋರ್ಟ್ ಸಿಟಿಯನ್ನು ವ್ಯವಹಾರಗಳಿಗೆ ಕೇಂದ್ರವಾಗಿ ಪರಿವರ್ತಿಸುವ ನಮ್ಮ ದೃಷ್ಟಿಯನ್ನು ತೆರೆದಿಟ್ಟಿದೆ. . ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಬೆಳವಣಿಗೆಯನ್ನು ಪೋಷಿಸುವ, ಉದ್ಯೋಗಾವಕಾಶಗಳನ್ನು ತರುವ ಮತ್ತು ಪ್ರದೇಶದ ಮೇಲೆ ಸಕಾರಾತ್ಮಕ ಸಾಮಾಜಿಕ-ಆರ್ಥಿಕ ಪ್ರಭಾವವನ್ನು ಉಂಟುಮಾಡುವ ಅಭಿವೃದ್ಧಿಶೀಲ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಏರ್‌ಪೋರ್ಟ್ ಸಿಟಿಯೊಳಗೆ ಆತಿಥ್ಯ ಮತ್ತು ಮನರಂಜನಾ ಪ್ರದೇಶಗಳು ಇರುತ್ತದೆ. ಬಿಸಿನೆಸ್ ಪಾರ್ಕ್‌ನಲ್ಲಿ ಕಾಂಬೊ ಹೋಟೆಲ್ ಮತ್ತು ಕನ್ಸರ್ಟ್ ಅರೆನಾ ಇರುತ್ತದೆ. ಕಾಂಬೊ ಹೋಟೆಲ್ ಭಾರತದ ಅತಿದೊಡ್ಡ ಹಾಸ್ಪಿಟಲಾಟಿ ಸಂಸ್ಥೆಗಳಲ್ಲಿ ಒಂದಾಗಲು ಸಿದ್ಧವಾಗಿದೆ. ಒಟ್ಟು 775 ಕೀಗಳನ್ನು ಒಳಗೊಂಡಿರುವ ಈ ಹೋಟೆಲ್‌ನಲ್ಲಿ ವಿವಾಂಟಾ ಬ್ರಾಂಡ್‌ನ 450 ರೂಮ್‌ಗು ಇದ್ದರೆ, ಜಿಂಜರ್ ಬ್ರ್ಯಾಂಡ್ 325 ರೂಮ್‌ಗಳು ಇರಲಿದೆ. 2026 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಂದಾಗಿ ಏರ್‌ಪೋರ್ಟ್ ಸಿಟಿ ಉನ್ನತ ಶ್ರೇಣಿಯ ತಾಣವಾಗಿ ಬದಲಾಗಲಿದೆ. ಏರ್‌ಪೋರ್ಟ್ ಸಿಟಿಯಲ್ಲಿ ಈಗಾಗಲೇ ಇರುವ ಹಾಸ್ಪಿಟಾಲಿಟಿ ಸಂಸ್ಥೆಯೂ ವಿಸ್ತರಣೆ ಕಾಣಲಿದೆ. ತಾಜ್ ಬೆಂಗಳೂರು ಹೋಟೆಲ್ ಈಗಾಗಲೇ 370 ರೂಮ್‌ಗಳನ್ನು ಹೊಂದಿದೆ. ಆದರೆ, ನಗರದಲ್ಲಿ ಪಂಚತಾರಾ ವಾಸ್ತವ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ಹೋಟೆಲ್ ಕೂಡ ತನ್ನ ಸಾಮರ್ಥ್ಯವನ್ನು ವಿಸ್ತರಣೆ ಮಾಡಲಿದೆ.