ಬೆಂಗಳೂರು: ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ತಲೆದೋರಿದ್ದು, ಈ ನಿಟ್ಟಿನಲ್ಲಿ ನಗರ ಪೊಲೀಸರು ‘ಟ್ರಾಫಿಕ್ ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್’ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದ್ದಾರೆ.
ಟ್ರಾಫಿಕ್ ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್ ಎಂಬುದು ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯಾಗಿದ್ದು, ಯಾವುದೇ ಸಂಚಾರ ದಟ್ಟಣೆ ಪರಿಸ್ಥಿತಿ ಎದುರಿಸಲು ಹಾಗೂ ಮಾಹಿತಿ ಪಡೆಯಲು ಸಹಾಯಕವಾಗಿದೆ. ಈ ವ್ಯವಸ್ಥೆ ಕುರಿತು ಈಗಾಗಲೇ ಸಂಚಾರ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದೇ ಆದರೆ, ದೇಶದಲ್ಲೇ ‘ಟ್ರಾಫಿಕ್ ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್’ ವ್ಯವಸ್ಥೆಯನ್ನು ಪರಿಚಯಿಸಿದ’ವರಲ್ಲಿ ನಗರ ಮೊದಲಾಗಲಿದೆ.
ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ಮಾತನಾಡಿ, “ಇತ್ತೀಚೆಗೆ ಸರ್ಕಾರಕ್ಕೆ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ. ಮೈಕ್ರೋ ಸಿಮ್ಯುಲೇಶನ್ ಮಾಡೆಲಿಂಗ್ ವ್ಯವಸ್ಥೆಯು ಸಾಫ್ಟ್‌ವೇರ್ ಮತ್ತು ಕೆಲವು ಐಟಿ ಉಪಕರಣಗಳನ್ನು ಒಳಗೊಂಡಿದೆ, ಇದಕ್ಕೆ ಅಂದಾಜು 4 ಕೋಟಿ ರೂ. ವೆಚ್ಚವಾಗಲಿದೆ. ಈ ಸಾಫ್ಟ್ ವೇರ್ ನ್ನು ನಾವು ಅವುಗಳನ್ನು ವಿದೇಶದಿಂದ ಖರೀದಿಸಬೇಕಾಗುತ್ತದೆ. ಕಡಿಮೆ ಟ್ರಾಫಿಕ್ ಹೊಂದಿರುವ ದೇಶಗಳು ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ.ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಅಳವಡಿಸಲಾಗಿರುವ ಈ ವ್ಯವಸ್ಥೆಯಲ್ಲಿ ಯಾವುದೇ ಟ್ರಾಫಿಕ್ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಕವಾಗಿದೆ. ರಸ್ತೆಗಳಲ್ಲಿ ಯಾವುದೇ ಉದ್ದೇಶಿತ ನಿರ್ಧಾರವನ್ನು ಅನುಷ್ಠಾನಗೊಳಿಸುವ ಮೊದಲು ನಾವು ರಸ್ತೆಗಳ ಮೇಲೆ ಅದರ ಪರಿಣಾಮವನ್ನು ಇದರಿಂದ ಪರಿಶೀಲಿಸಬಹುದು. ಸಿಮ್ಯುಲೇಶನ್ ವ್ಯವಸ್ಥೆಯಿಂದ ಸಂಚಾರ ನಿರ್ವಹಿಸುವಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಬಹುದು. ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಭಾರಿ ದಟ್ಟಣೆಯನ್ನು ಗಮನಿಸಿದರೆ, ಹತ್ತಿರದ ರಸ್ತೆಗಳ ಮೂಲಕ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಅದೇ ರೀತಿ, ಯಾವುದೇ ರಸ್ತೆಯಲ್ಲಿ ಏಕಮಾರ್ಗವನ್ನು ಪರಿಚಯಿಸಲು ಯೋಜಿಸಿದ್ದರೆ, ಸಿಮ್ಯುಲೇಶನ್ ಮೂಲಕ ಸುತ್ತಮುತ್ತಲಿನ ರಸ್ತೆಗಳ ಮೇಲೆ ಅದರ ಪರಿಣಾಮವನ್ನು ನಾವು ನಿರ್ಣಯಿಸಬಹುದು ಎಂದು ವಿವರಿಸಿದ್ದಾರೆ.
ಇದೇ ವೇಳೆ 2024ರ ಮೊದಲ ನಾಲ್ಕು ತಿಂಗಳಲ್ಲಿ ನಗರದಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಸಮಸ್ಯೆಗಳು ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್ ಬೋರ್ಡ್, ಗೊರ್ಗುಂಟೆಪಾಳ್ಯ, ದೇವರಬೀಸನಹಳ್ಳಿ ಮತ್ತು ಬಿಗ್ ಬಜಾರ್ ಜಂಕ್ಷನ್‌ಗಳಲ್ಲಿ ಕಂಡು ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಡಿಸೆಂಬರ್ 31, 2023 ರವೇಳೆಗೆ 1.2 ಕೋಟಿ ವಾಹನಗಳನ್ನು ನೋಂದಾವಣೆಯಾಗಿದ್ದು, ಪ್ರತಿದಿನ ಸರಾಸರಿ 3,000 ಹೊಸ ವಾಹನಗಳು ರಸ್ತೆಗಳಿಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಹೊಸ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುವ ಭರವಸೆ ಇದೆ ಎಂಂದು ಸಾರಿಗೆ ಇಲಾಖೆ ತಿಳಿಸಿದೆ.